ಜೆಡಿಎಸ್‌ನಿಂದ ಸ್ವತಂತ್ರವಾಗಿ ಸರಕಾರ ರಚನೆ: ಪಿ.ಜಿ.ಆರ್.ಸಿಂಧ್ಯಾ

ಬೆಂಗಳೂರು, ಎ.21: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸ್ವತಂತ್ರವಾಗಿ ಸರಕಾರವನ್ನು ಮಾಡಲಾಗುತ್ತದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಲಾಗಿದೆ. ಮತದಾರರಿಂದ ಅತ್ಯುತ್ತಮ ಸ್ಪಂದನ ಸಿಕ್ಕಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಚುನಾವಣೆಯೇ ಇನ್ನೂ ನಡೆದಿಲ್ಲ. ಆದರೆ, ಕೆಲವರು ಇನ್ನೇನು 24 ದಿನಗಳಲ್ಲಿ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಈ ರೀತಿಯ ಧೋರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂದು ಟೀಕಿಸಿದರು.
ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಂಧ್ಯಾ, ಇದುವರೆಗೆ 1952 ರಿಂದ ಕಳೆದ ಲೋಕಸಭೆ ಚುನಾವಣೆವರೆಗೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಯಾವುದೂ ಸರಿಯಾಗಿ ಬಂದಿಲ್ಲ. ಅಲ್ಲದೆ, 1985 ರಲ್ಲಿ ಜನತಾ ಪರಿವಾರ ಕೇವಲ 20 ಸ್ಥಾನಗಳನ್ನು ಪಡೆಯಲಿದೆ ಎಂಬ ಸಮೀಕ್ಷೆ ಬಂದಿತ್ತು. ಆದರೆ, ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ 148 ಸ್ಥಾನಗಳನ್ನು ಜನತಾ ಪರಿವಾರ ಗೆದ್ದು ಸರಕಾರ ರಚನೆ ಮಾಡಲಾಗಿತ್ತು ಎಂದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಜನವಿರೋಧಿ ಆಡಳಿತದಿಂದ ಬೇಸರಗೊಂಡಿರುವ ಜನತೆ ಈ ಚುನಾವಣೆಯಲ್ಲಿ ಜೆಡಿಎಸ್ ಕೈ ಹಿಡಿಯಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕನಕಪುರದ ವಾಸಿಯಾದ ನೀವು ಬೀದರ್‌ನ ಬಸವ ಕಲ್ಯಾಣದಿಂದ ಸ್ಪರ್ಧೆ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಭಾಗದಲ್ಲಿ ನನಗೆ ಹೆಚ್ಚು ಸಂಬಂಧಿಗಳಿದ್ದಾರೆ. ಅದಕ್ಕಿಂತ ಮಿಗಿಲಾಗಿ ಹೆಗಡೆ ಸರಕಾರದಲ್ಲಿ ನಾನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಜಿಲ್ಲೆಯಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಅದು ನನಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಯುವ ನಾಯಕ ಚಂದ್ರಶೇಖರ್ ಹಾಗೂ ಪೂಜಾ ಗಾಂಧಿ ಉಪಸ್ಥಿತರಿದ್ದರು.







