ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿ ಪ್ರಚಾರ ನಡೆಸಿದ ಮೇಯರ್ ಸಂಪತ್‌ರಾಜ್
.jpg)
ಬೆಂಗಳೂರು.ಎ.21: ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮೇಯರ್ ಆರ್.ಸಂಪತ್‌ರಾಜ್ ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಬೈಯಪ್ಪನಹಳ್ಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಎ.20 ರಂದು ನಾಮಪತ್ರ ಸಲ್ಲಿಸಿರುವ ಅವರು, ಇಂದಿನಿಂದ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಪಾಲಿಕೆಯ ಮೇಯರ್ ಆಗಿರುವ ಸಂಪತ್‌ರಾಜ್ ಪ್ರಚಾರ ನಡೆಸಿದ ಎಲ್ಲ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬೆಂಬಲಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೈಯಪ್ಪನಹಳ್ಳಿಗೆ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು ಮೆರವಣಿಗೆ ಮಾಡಿ ಬೃಹತ್ ಜಾಥ ನಡೆಸಿದರು.
ಮೇಯರ್ ಆದ ಮೇಲೆ ಬೃಹತ್ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದು, ಈ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದರೆ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಹೊಂದಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಸಮಸ್ಯೆಗಳ ಪರಿಹಾರಕ್ಕಾಗಿ ಈ ಬಾರಿ ತಮಗೆ ಆಶೀರ್ವದಿಸಬೇಕೆಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.





