ಬಂಟ್ವಾಳ: ಇಂದು ನಾಮಪತ್ರ ಸಲ್ಲಿಸಬೇಕಿದ್ದ ಅಭ್ಯರ್ಥಿಗೆ ನ್ಯಾಯಾಂಗ ಬಂಧನ!

ಬಂಟ್ವಾಳ, ಎ.24: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಮಂಗಳವಾರ ಉಮೇದುವಾರಿಕೆ ಸಲ್ಲಿಸಬೇಕಿದ್ದ ಅಭ್ಯರ್ಥಿಯೋರ್ವ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಸೇರಿದ ಘಟನೆ ಸೋಮವಾರ ನಡೆದಿದೆ.
ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವ ಬಂದಿರುವ ಎಂಇಪಿ(ಮಹಿಳಾ ಎಂಪವರ್‌ಪಾರ್ಟಿ) ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸಿ.ರೋಡ್ ಸಮೀಪದ ಶಾಂತಿಅಂಗಡಿ ನಿವಾಸಿ ಶಮೀರ್ ಯಾನೆ ಚಮ್ಮಿ ಶಾಂತಿಅಂಗಡಿ ನ್ಯಾಯಾಂಗ ಬಂಧನಕ್ಕೊಳಗಾದ ವ್ಯಕ್ತಿ.
ಶಮೀರ್ 2014ರಲ್ಲಿ ನಡೆದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಧ್ವಂಸ ಪ್ರಕರಣದ ಆರೋಪಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಶಮೀರ್‌ಗೆ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇವರು ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಲಯವು ಶಮೀರ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಶಮೀರ್ ಎಂಇಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದಲ್ಲಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಬೇಕಿತ್ತು. ಶಮೀರ್ ಹಿಂದೊಮ್ಮೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು.
ಶಮೀರ್ ಪರ ನಾಮಪತ್ರ ಸಲ್ಲಿಕೆ
ಎಂ.ಇ.ಪಿ. ಪಕ್ಷದ ಅ್ಯರ್ಥಿ ಶಮೀರ್ ಯಾನೆ ಚಮ್ಮಿ ಶಾಂತಿಯಂಗಡಿ ಪರವಾಗಿ ಬೆಂಬಲಿಗ ಐಡಿಯಲ್ ಜಬ್ಬಾರ್ ಎಂಬವರು ಮಂಗಳವಾರ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಇಲ್ಯಾಸ್ ಐಟಿಸಿ, ಇಸ್ಮಾಯೀಲ್, ನಿಝಾಮುದ್ದಿನ್, ಅಬೂ ಶಮೀರ್ ಹಾಜರಿದ್ದರು. ಇದಕ್ಕೂ ಮೊದಲು ಕೈಕಂಬದಿಂದ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಯಿತು.







