ಮಿದುಳು ಕ್ಷಯರೋಗದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಯಿಲ್ಲಿದೆ
ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಶ್ವಾಸಕೋಶಗಳಲ್ಲಿ ಉಂಟಾಗುವ ಸೋಂಕು ಕ್ಷಯರೋಗಕ್ಕೆ ಕಾರಣವಾಗುತ್ತದೆ,ಆದರೆ ಈ ಮಾರಣಾಂತಿಕ ಕಾಯಿಲೆ ಶರೀರದ ಇತರ ಭಾಗಗಳಿಗೂ ಹರಡುವ ಸಾಮರ್ಥ್ಯವನ್ನು ಹೊಂದಿದೆ.
ಮಿದುಳು ಕೂಡ ಕ್ಷಯರೋಗಕ್ಕೆ ಗುರಿಯಾಗುತ್ತದೆ ಮತ್ತು ಇದರಿಂದ ಮಿದುಳನ್ನು ಸುತ್ತುವರಿದಿರುವ ಅಂಗಾಂಶಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದನ್ನು ಮೆನಿಂಜೈಟಿಸ್ ಟ್ಯುಬರ್‌ಕುಲೊಸಿಸ್ ಎಂದು ಕರೆಯಲಾಗುತ್ತದೆ. ಮಿದುಳು ಮತ್ತು ಮಿದುಳು ಬಳ್ಳಿಯ ರಕ್ಷಣಾ ವಪೆಗಳ ತೀವ್ರ ಉರಿಯೂತ ಈ ರೋಗದ ಲಕ್ಷಣವಾಗಿದೆ. ಮೈಕೊಬ್ಯಾಕ್ಟೀರೀಯಂ ಟ್ಯುಬರ್‌ಕುಲೊಸಿಸ್ ಈ ರೋಗಕ್ಕೆ ಕಾರಣ ವಾಗಿದೆ.
ಮಿದುಳಿನ ಕ್ಷಯ ಮಕ್ಕಳಲ್ಲಿ ಮತ್ತು ಎಲ್ಲ ವಯೋಮಾನಗಳ ವಯಸ್ಕರಲ್ಲಿ ಕಾಣಿಸಿ ಕೊಳ್ಳಬಹುದು. ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿರುವವರು ಈ ರೋಗದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಒಂದು ಅಂದಾಜಿನಂತೆ ಭಾರತದಲ್ಲಿ ಪ್ರತಿವರ್ಷ 2.2 ಮಿಲಿಯನ್ ಜನರು ಕ್ಷಯರೋಗಕ್ಕೆ ಬಲಿಯಾಗುತ್ತಾರೆ, ಮಿದುಳು ಕ್ಷಯರೋಗದಿಂದ ಸಾವನ್ನಪ್ಪುವವರ ಪ್ರಮಾಣ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 1.5ರಷ್ಟಿದೆ.
ಅತಿಯಾದ ಮದ್ಯಪಾನ,ಎಚ್‌ಐವಿ/ಏಡ್ಸ್,ದುರ್ಬಲಗೊಂಡ ರೋಗ ನಿರೋಧಕ ಶಕ್ತಿ ಮತ್ತು ಮಧುಮೇಹ ಮಿದುಳು ಕ್ಷಯರೋಗದ ಹೆಚ್ಚಿನ ಅಪಾಯಕ್ಕೆ ಕಾರಣವಾಗಿವೆ.
ಕ್ಷಯರೋಗದಂತೆ ಮಿದುಳು ಕ್ಷಯವು ಸಾಂಕ್ರಾಮಿಕವಲ್ಲ ಮತ್ತು ಇದರ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ದಿನ ಕಳೆದಂತೆ ಈ ಲಕ್ಷಣಗಳು ತೀವ್ರಗೊಳ್ಳುತ್ತವೆ.
ಬಳಲಿಕೆ,ಅಲ್ಪ ಪ್ರಮಾಣದ ಜ್ವರ,ವಾಕರಿಕೆ ಮತ್ತು ವಾಂತಿ,ಮಾನಸಿಕ ಗೊಂದಲ ಮತ್ತು ಉದ್ವೇಗ,ಜಡತ್ವ ಮತ್ತು ಪ್ರಜ್ಞೆಯನ್ನು ಕಳೆದುಕೊಳ್ಳುವುದು ಮಿದುಳು ಕ್ಷಯದ ಸಾಮಾನ್ಯ ಲಕ್ಷಣಗಳಾಗಿವೆ.
ಮಿದುಳು ಕ್ಷಯದ ಚಿಕಿತ್ಸೆಯಲ್ಲಿ ಪಥ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಶರೀರದ ರೋಗ ನಿರೋಧಕ ಶಕ್ತಿಯು ಹೆಚ್ಚಲು ಮತ್ತು ಈ ರೋಗದ ವಿರುದ್ಧ ಪ್ರತಿರೋಧ ನಿರ್ಮಾಣಗೊಳ್ಳಲು ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಅಗತ್ಯವಾಗಿದೆ. ರೋಗಿಯು ಕಾಯಿಲೆಯಿಂದ ಚೇತರಿಸಿಕೊಳ್ಳುವಂತಾಗಲು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಆಹಾರದಲ್ಲಿರಬೇಕು. ರೋಗಿಯು ಮೊದಲ ಕೆಲವು ದಿನಗಳ ಕಾಲ ಆಹಾರದಲ್ಲಿ ಕೇವಲ ಹಣ್ಣುಗಳನ್ನು ಸೇವಿಸಬೇಕು ಮತ್ತು ನಂತರದ ದಿನಗಳಲ್ಲಿ ಹಾಲು ಮತ್ತು ಹಣ್ಣುಗಳನ್ನು ಸೇವಿಸಬಹುದಾಗಿದೆ. ಹಾಲು ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿ ಹೊಂದಿರುವುದರಿಂದ ಮಿದುಳು ಕ್ಷಯರೋಗಿಗಳಿಗೆ ಅತ್ಯುತ್ತಮವಾಗಿದೆ.
ರೋಗಿಯು ಪಥ್ಯವನ್ನು ಅನುಸರಿಸುವಾಗ ಬಿಳಿ ಸಕ್ಕರೆ,ಸಂಸ್ಕರಿತ ಧಾನ್ಯಗಳು, ನೆಲಗಡಲೆಯಂತಹ ಬೀಜಗಳು,ಕಡಬಿನಂತಹ ಖಾದ್ಯಗಳು,ಕ್ಯಾನ್ಡ್ ಮತ್ತು ಸಂಸ್ಕರಿತ ಆಹಾರಗಳಿಂದ ದೂರವಿರಬೇಕು. ಕಡುವಾದ ಚಹಾ ಮತ್ತು ಕಾಫಿ,ಉಪ್ಪಿನಕಾಯಿ ಮತ್ತು ಸಾಸ್‌ಗಳನ್ನೂ ವರ್ಜಿಸಬೇಕು.
ಮಿದುಳು ಕ್ಷಯದ ಆರಂಭಿಕ ಕ್ಲಿನಿಕಲ್ ಲಕ್ಷಣಗಳು ನಿರ್ದಿಷ್ಟತೆಯನ್ನು ಹೊಂದಿರುವುದಿಲ್ಲ ಮತ್ತು ಇತರ ನರಸಂಬಂಧಿತ ರೋಗಗಳಿರಬಹುದು ಎಂಬ ಗೊಂದಲವನ್ನು ಹುಟ್ಟುಹಾಕುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಈ ರೋಗವನ್ನು ಪತ್ತೆ ಹಚ್ಚುವಲ್ಲಿ ವಿಳಂಬವಾಗುತ್ತದೆ.
ಮಿದುಳು ಕ್ಷಯರೋಗಿಗಳ ದೈಹಿಕ ತಪಾಸಣೆಯನ್ನು ನಡೆಸುವ ವೈದ್ಯರು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಬೆನ್ನುಮೂಳೆಯಿಂದ ದ್ರವವನ್ನು ಸಂಗ್ರಹಿಸಿ ಮಿದುಳು ರೋಗವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಮೆನಿಂಜೆಗಳು ಅಥವಾ ಮಿದುಳು ಹಾಗೂ ಮಿದುಳು ಬಳ್ಳಿಯನ್ನು ಆವರಿಸಿರುವ ರಕ್ಷಣಾ ವಪೆಗಳ ಬಯಾಪ್ಸಿ,ಬ್ಲಡ್ ಕಲ್ಚರ್,ಎದೆಯ ಎಕ್ಸ್-ರೇ, ತಲೆಯ ಸಿಟಿ ಸ್ಕಾನ್ ಮತ್ತು ಚರ್ಮದ ತಪಾಸಣೆ ಇವೂ ಮಿದುಳು ಕ್ಷಯವನ್ನು ಖಚಿತ ಪಡಿಸಿಕೊಳ್ಳುವ ಇತರ ಪರೀಕ್ಷೆಗಳಲ್ಲಿ ಸೇರಿವೆ.
ಚಿಕಿತ್ಸೆಯ ಆರಂಭದ ಎರಡು ತಿಂಗಳ ಅವಧಿಯಲ್ಲಿ ರೋಗಿಯ ಬಗ್ಗೆ ತೀವ್ರ ನಿಗಾ ವಹಿಸುವುದು ಅಗತ್ಯವಾಗುತ್ತದೆ. ಚಿಕಿತ್ಸೆಯಲ್ಲಿ ನಾಲ್ಕು ವಿಧದ ಮಾತ್ರೆಗಳನ್ನು ಬಳಸಲಾಗುತ್ತಿದ್ದು, ಈ ಪೈಕಿ ಎರಡು ಮಾತ್ರೆಗಳನ್ನು ರೋಗಿಯು ನಿರಂತರ ಏಳು ತಿಂಗಳು ಸೇವಿಸಬೇಕಾಗುತ್ತದೆ. ಅಲ್ಲದೆ ಅಡ್ಡಪರಿಣಾಮಗಳಿಂದಾಗಿ ಆಗಾಗ್ಗೆ ಔಷಧಿಗಳ ಕಾಂಬಿನೇಷನ್ ಅನ್ನು ಕೂಡ ವೈದ್ಯರು ಶಿಫಾರಸು ಮಾಡುತ್ತಾರೆ. ಈ ರೋಗದ ಚಿಕಿತ್ಸೆಗೆ ಒಟ್ಟು ಒಂಭತ್ತು ತಿಂಗಳು ಬೇಕಾಗುತ್ತದೆ. ಮಿದುಳು ಕ್ಷಯವು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಗಂಭೀರ ಅಪಾಯ ಗಳನ್ನುಂಟು ಮಾಡುತ್ತದೆ. ಕೆಲವು ಪ್ರಕರಣಗಳಲ್ಲಿ ಅದು ಜೀವಕ್ಕೆ ಆಪತ್ತನ್ನೂ ತರುತ್ತದೆ. ಸೆಳವು,ಮಿದುಳಿನ ಮೇಲೆ ಹೆಚ್ಚಿನ ಒತ್ತಡ,ಶ್ರವಣಶಕ್ತಿ ನಷ್ಟ,ಮಿದುಳಿನ ರಕ್ತಸ್ರಾವ ಮತ್ತು ಪಾರ್ಶ್ವವಾಯು ಈ ರೋಗದ ದುಷ್ಪರಿಣಾಮಗಳಲ್ಲಿ ಸೇರಿವೆ.
ಮಿದುಳಿನ ಮೇಲೆ ಒತ್ತಡ ಹೆಚ್ಚಾದರೆ ಅದು ಮಿದುಳಿಗೆ ಕಾಯಂ ಹಾನಿಯನ್ನುಂಟು ಮಾಡುತ್ತದೆ. ದೃಷ್ಟಿಯಲ್ಲಿ ಬದಲಾವಣೆ ಮತ್ತು ತಲೆನೋವು ಏಕಕಾಲದಲ್ಲಿ ಉಂಟಾದರೆ ಇದು ಮಿದುಳಿನ ಮೇಲೆ ಹೆಚ್ಚಿನ ಒತ್ತಡದ ಲಕ್ಷಣವಾಗಿರಬಹು ದಾದ್ದರಿಂದ ತಕ್ಷಣ ವೈದ್ಯರನ್ನು ಕಾಣುವುದು ಅತ್ಯಗತ್ಯವಾಗುತ್ತದೆ.
ಕ್ಷಯರೋಗದ ಸೋಂಕನ್ನು ತಡೆಯುವುದು ಮಿದುಳು ಕ್ಷಯವನ್ನು ತಡೆಯುವ ಅತ್ಯುತ್ತಮ ಮಾರ್ಗವಾಗಿದೆ. ಕ್ಷಯರೋಗವು ಸಾಮಾನ್ಯವಾಗಿರುವ ಸಮುದಾಯ ಗಳಲ್ಲಿ ಬಿಸಿಜಿ ಲಸಿಕೆಯು ರೋಗದ ಹರಡುವಿಕೆಯನ್ನು ತಡೆಯಲು ನೆರವಾಗುತ್ತದೆ. ಎಳೆಯ ಮಕ್ಕಳಲ್ಲಿ ಕ್ಷಯರೋಗ ಸೋಂಕನ್ನು ನಿಯಂತ್ರಿಸುವಲ್ಲಿ ಈ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ.