ದೇಶದ ಈ ಎರಡು ಕಡೆ ನಿರ್ಮಾಣವಾಗಲಿದೆ ‘ವಿಶೇಷ ರೈಲ್ವೇ ನಿಲ್ದಾಣ’
ಇವುಗಳ ವಿಶೇಷತೆಯೇನು ಗೊತ್ತಾ ?

ಹೊಸದಿಲ್ಲಿ, ಎ.24: ದೇಶದಲ್ಲೇ ಪ್ರಪ್ರಥಮವಾದ, ಅತ್ಯಾಧುನಿಕ ‘ವಿಮಾನನಿಲ್ದಾಣದ ರೀತಿಯ’ ರೈಲ್ವೇ ನಿಲ್ದಾಣಗಳು ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಶೀಘ್ರವೇ ಕಾರ್ಯಾರಂಭಗೊಳ್ಳಲಿವೆ . ಮಧ್ಯಪ್ರದೇಶದ ಬೋಪಾಲ್‌ನ ಹಬೀಬ್‌ಗಂಜ್ ರೈಲ್ವೇ ನಿಲ್ದಾಣ ಮೊದಲಿಗೆ ಅಂದರೆ, ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದ್ದರೆ ಗುಜರಾತ್‌ನ ಗಾಂಧೀನಗರದ ರೈಲ್ವೇ ನಿಲ್ದಾಣ 2019ರ ಜನವರಿಯಲ್ಲಿ ಕಾರ್ಯಾರಂಭಗೊಳ್ಳಲಿದೆ.
ಭಾರತೀಯ ರೈಲ್ವೇಯನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿ 1 ಲಕ್ಷ ಕೋಟಿ ರೂ. ವೆಚ್ಚ ಮಾಡಿ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. 2019ರ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಶೃಂಗಸಭೆಗೂ ಮೊದಲು ಗಾಂಧೀನಗರ ರೈಲುನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ರೈಲ್ವೇ ನಿಲ್ದಾಣ ಅಭಿವೃದ್ಧಿ ನಿಗಮ(ಐಆರ್‌ಎಸ್‌ಡಿಸಿ)ದ ಆಡಳಿತ ನಿರ್ದೇಶಕ ಹಾಗೂ ಸಿಇಒ ಎಸ್.ಕೆ.ಲೋಹಿಯಾ ತಿಳಿಸಿದ್ದಾರೆ.
ಹಬೀಬ್‌ಗಂಜ್ ರೈಲ್ವೇ ನಿಲ್ದಾಣ:
ಈ ನಿಲ್ದಾಣದಲ್ಲಿ 600 ಆರಾಮದಾಯಕ ಆಸನ ವ್ಯವಸ್ಥೆಯಿದೆ. ಸ್ವಚ್ಛ ಹಾಗೂ ನಿರ್ಮಲ ಶೌಚಾಲಯಗಳು, ಹಾಗೂ ವಿಮಾನನಿಲ್ದಾಣದ ರೀತಿ ವಿಶಾಲವಾದ ಸ್ಥಳಾವಕಾಶ ಹೊಂದಿದ್ದು, ಇಲ್ಲಿ ಅಂಗಡಿಗಳು, ಕೆಫೆ, ಫಾಸ್ಟ್‌ಫುಡ್ ರೆಸ್ಟೋರೆಂಟ್‌ಗಳು ಇರುತ್ತವೆ. ಅಲ್ಲದೆ ಎಲ್ಲಾ ಪ್ರಯಾಣಿಕರಿಗೂ ಉಚಿತ ಹಾಗೂ ಸುರಕ್ಷಿತ ವೈಫೈ ವ್ಯವಸ್ಥೆ ಒದಗಿಸಲಾಗುವುದು. ಜೊತೆಗೆ ಲಾಂಜ್‌ಗಳು, ವೀಡಿಯೊ ಗೇಮ್ ವ್ಯವಸ್ಥೆ , ಮ್ಯೂಸಿಯಂ ಮುಂತಾದವುಗಳನ್ನು ಒದಗಿಸುವ ಯೋಜನೆಯಿದೆ. ರೈಲು ನಿಲ್ದಾಣದ ಕಟ್ಟಡ ಅತ್ಯಾಧುನಿಕವಾಗಿದ್ದು ಬೃಹತ್ ಗಾಜಿನ ಗುಮ್ಮಟದ ಶೈಲಿಯ ರಚನೆಯನ್ನು ಹೊಂದಿರುತ್ತದೆ ಎಂದು ಲೋಹಿಯಾ ತಿಳಿಸಿದ್ದಾರೆ.
ಈ ಆಧುನಿಕ ನಿಲ್ದಾಣಗಳ ನಿರ್ವಹಣೆ ಹಾಗೂ ಇದರಿಂದ ಉತ್ಪತ್ತಿಯಾಗುವ ಆದಾಯದ ನಿರ್ವಹಣೆಯ ಹೊಣೆಯನ್ನು ಐಆರ್‌ಎಸ್‌ಡಿಸಿಗೆ ವಹಿಸಲಾಗಿದೆ. ಈ ರೈಲು ನಿಲ್ದಾಣಗಳಲ್ಲಿ ದೊರೆಯುವ ಆದಾಯವನ್ನು ಭವಿಷ್ಯದಲ್ಲಿ ರೈಲು ನಿಲ್ದಾಣದ ಅಭಿವೃದ್ಧಿ ಹಾಗೂ ನಿರ್ವಹಣೆ ಪ್ರಕ್ರಿಯೆಗೆ ಮರು ಹೂಡಿಕೆ ಮಾಡಲಾಗುವುದು. ಪೂರ್ಣಗೊಂಡ ಬಳಿಕ ಹಬೀಬ್‌ಗಂಜ್ ರೈಲು ನಿಲ್ದಾಣದ ವಾರ್ಷಿಕ ನಿರ್ವಹಣಾ ವೆಚ್ಚ 4ರಿಂದ 5 ಕೋಟಿ ರೂ. ಆಗಿದ್ದರೆ, ದೊರಕಲಿರುವ ವಾರ್ಷಿಕ ಆದಾಯ 6.5 ಕೋಟಿ ರೂ.ನಿಂದ 7 ಕೋಟಿ ರೂ. ಆಗಲಿದೆ. ಹಬೀಬ್‌ಗಂಜ್ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯ ಒಟ್ಟಾರೆ ವೆಚ್ಚ ಸುಮಾರು 450 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ 100 ಕೋಟಿ ರೂ. ನಿಲ್ದಾಣ ಅಭಿವೃದ್ಧಿಗೆ ಹಾಗೂ 350 ಕೋಟಿ ರೂ. ವಾಣಿಜ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಲೋಹಿಯಾ ತಿಳಿಸಿದ್ದಾರೆ.
ಗಾಂಧೀನಗರ ರೈಲು ನಿಲ್ದಾಣ:
ಈ ನಿಲ್ದಾಣದ ಅಭಿವೃದ್ಧಿ ಕಾರ್ಯಕ್ಕೆ 2017ರ ಜನವರಿಯಲ್ಲಿ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದು 2019ರ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಬೀಬ್‌ಗಂಜ್ ನಿಲ್ದಾಣದಲ್ಲಿರುವ ರೀತಿಯ ವ್ಯವಸ್ಥೆ ಇಲ್ಲಿರುತ್ತದೆ. ಶೇ.42ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2019ರ ವೈಬ್ರೆಂಟ್ ಗುಜರಾತ್ ಶೃಂಗಸಭೆಗೂ ಮುನ್ನ ನಿಲ್ದಾಣ ಸಿದ್ಧವಾಗಲಿದೆ. ಗಾಂಧೀನಗರ ರೈಲ್ವೇ ನಿಲ್ದಾಣವನ್ನು 250 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ಐಆರ್‌ಎಸ್‌ಡಿಸಿ ಮತ್ತು ಗುಜರಾತ್ ರಾಜ್ಯ ಸರಕಾರ ಜಂಟಿಯಾಗಿ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದೆ. ರೈಲ್ವೇ ನಿಲ್ದಾಣದ ಅಭಿವೃದ್ಧಿಯ ಜೊತೆಗೆ, 300 ಕೋಣೆಗಳುಳ್ಳ ಪಂಚತಾರಾ ಹೋಟೆಲ್ ಕೂಡಾ ಆರಂಭಿಸಲಾಗುವುದು. ರೈಲ್ವೇ ಹಳಿಗಿಂತ 22 ಮೀಟರ್ ಎತ್ತರದಲ್ಲಿರುವ ಈ ಹೋಟೆಲ್ , ಮೂರು ಕಮಾನಿನ ಕಟ್ಟಡವನ್ನು ಹೊಂದಿದ್ದು ಹೂವಿನ ದಳದಂತೆ ವಿನ್ಯಾಸ ಹೊಂದಿರಲಿದೆ ಎಂದು ಲೋಹಿಯಾ ತಿಳಿಸಿದ್ದಾರೆ.







