ಯುವಕನ ಅಪಹರಿಸಿ ಕೊಲೆ ಯತ್ನ: ಐವರು ಆರೋಪಿಗಳ ಸೆರೆ

ಮಂಗಳೂರು, ಎ.24: ಯುವಕನೊಬ್ಬನನ್ನು ಅಪಹರಿಸಿ ಆತನ ಮೊಬೈಲ್ ಪೋನ್ ಹಾಗೂ ಬೈಕನ್ನು ಸುಲಿಗೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಡೀಲ್ ಗಾಣದಬೆಟ್ಟು ನಿವಾಸಿ ಧೀರಜ್ ಕುಮಾರ್ (23), ವಾಮಂಜೂರು ಸಂತೋಷ್‌ನಗರ ನಿವಾಸಿ ಪ್ರಾಣೇಶ್ ಪೂಜಾರಿ (21), ಕಣ್ಣೂರು ಜಾನಕಿ ತೋಟ ನಿವಾಸಿ ನೀಕ್ಷಿತ್ ಪೂಜಾರಿ (21), ಜಲ್ಲಿಗುಡ್ಡೆ ಜಯನಗರ ನಿವಾಸಿ ಪ್ರೀತಮ್ ಪೂಜಾರಿ (22), ಅರ್ಕುಳ ನಿವಾಸಿ ನಿತಿನ್ ಪೂಜಾರಿ (20) ಬಂಧಿತ ಆರೋಪಿಗಳು. ಆರೋಪಿಗಳಿಂದ 15 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್, 20 ಸಾವಿರ ರೂ. ವೌಲ್ಯದ ಬೈಕ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಎ.15ರಂದು ಸಂಜೆ 4:30ಕ್ಕೆ ವೇಳೆಗೆ ಜಲ್ಲಿಗುಡ್ಡೆ ಜಯನಗರ ನಿವಾಸಿ ಗ್ಲಾನ್‌ಸನ್ ಎಂಬಾತನನ್ನು ಬಿಕರ್ನಕಟ್ಟೆಯಿಂದ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಅಡ್ಯಾರ್‌ನ ರೈಲ್ವೆ ಟ್ರಾಕ್ ಬಳಿ ಹಣ ನೀಡಲು ಕೊಡುವಂತೆ ಒತ್ತಾಯಿಸಿದ್ದಲ್ಲದೆ 15 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕಸಿದುಕೊಂಡಿದ್ದರು.ಅಲ್ಲದೆ ಆತನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಲ್ಲದೆ ಮನೆಯವರಿಗೆ ಫೋನ್ ಮಾಡಿ 1 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಅಲ್ಲಿಂದ ನೀರುಮಾರ್ಗ ಕೆಲರಾಯ್‌ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾಲ್ವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರೆಂದು ತಿಳಿದು ಬಂದಿದೆ.







