ಡೆಲ್ಲಿ ಡೇರ್ ಡೆವಿಲ್ಸ್ ನಾಯಕತ್ವ ತ್ಯಜಿಸಿದ ಗಂಭೀರ್

ಹೊಸದಿಲ್ಲಿ, ಎ.25: ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತಿರುವ ಗೌತಮ್ ಗಂಭೀರ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಮುಂಬೈ ದಾಂಡಿಗ ಶ್ರೇಯಸ್ ಅಯ್ಯರ್ ಡೆಲ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಡೆಲ್ಲಿ 2017ರ ಋತುವಿನ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿತ್ತು. ಈ ವರ್ಷವೂ ಕಳಪೆ ಪ್ರದರ್ಶನ ಮುಂದುವರಿಸಿರುವ ಡೆಲ್ಲಿ ಈ ತನಕ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್,‘‘ನಾಯಕತ್ವ ತ್ಯಜಿಸುತ್ತಿರುವುದು ನನ್ನ ವೈಯಕ್ತಿಕ ನಿರ್ಧಾರ. ತಂಡಕ್ಕೆ ಸಾಕಷ್ಟು ಕೊಡುಗೆ ನೀಡಲು ನನ್ನಿಂದ ಸಾಧ್ಯವಾಗಿಲ್ಲ. ತಂಡದ ನಾಯಕನಾಗಿ ಕಳಪೆ ಪ್ರದರ್ಶನದ ಹೊಣೆ ಹೊತ್ತುಕೊಳ್ಳುವೆ. ಇಂತಹ ನಿರ್ಧಾರಕ್ಕೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ’’ ಎಂದು ಹೇಳಿದರು.
ಗಂಭೀರ್ ನಡೆಸಿದ ಪತ್ರಿಕಾಗೋಷ್ಠಿಯ ವೇಳೆ ಫ್ರಾಂಚೈಸಿ ಸಿಇಒ ಹೇಮಂತ್ ದುವಾ ಹಾಗೂ ಕೋಚ್ ರಿಕಿ ಪಾಂಟಿಂಗ್ ಇದ್ದರು.
‘‘ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದ್ದ ಟೀಮ್ ಮ್ಯಾನೇಜ್‌ಮೆಂಟ್, ಕೋಚ್‌ಗಳಿಗೆ ಧನ್ಯವಾದ ಸಲ್ಲಿಸುವೆ’’ ಎಂದು ಗಂಭೀರ್ ಹೇಳಿದ್ದಾರೆ.
ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಎರಡು ಬಾರಿ ಐಪಿಎಲ್ ಟ್ರೋಫಿ ಜಯಿಸಿತ್ತು. ಈ ವರ್ಷ ಡೆಲ್ಲಿ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಗಂಭೀರ್ ಸ್ವತಃ ಕಳಪೆ ಪ್ರದರ್ಶನ ನೀಡಿದ್ದರು. 36ರ ಹರೆಯದ ಗಂಭೀರ್ 5 ಇನಿಂಗ್ಸ್‌ನಲ್ಲಿ ಕೇವಲ 85 ರನ್ ಗಳಿಸಿದ್ದರು. ಡೆಲ್ಲಿ ಆಡಿದ್ದ ಮೊದಲ ಪಂದ್ಯದಲ್ಲಿ 55 ರನ್ ಗಳಿಸಿದ್ದರು. ಆ ಬಳಿಕ 8,3,4 ರನ್ ಗಳಿಸಿದ್ದರು.







