ತಾಕತ್ತಿದ್ದರೆ ಜೆಡಿಎಸ್ ಎದುರು ಕಾಂಗ್ರೆಸ್ ಗೆದ್ದು ತೋರಿಸಲಿ: ಹುಣಸೆಮಕ್ಕಿ ಲಕ್ಷ್ಮಣ

ಮೂಡಿಗೆರೆ, ಎ.25: ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಅವರು ಶಾಸಕರಾಗಿ 5 ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನೇ ಮಾಡಿಲ್ಲ ಎಂದು ಕಾಂಗ್ರೆಸ್‍ನ ವಕ್ತಾರ ಎಂ.ಎಸ್.ಅನಂತ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಜೆಡಿಎಸ್ ಪ.ಜಾತಿ ವಿಭಾಗದ ಅಧ್ಯಕ್ಷ ಹುಣಸೆಮಕ್ಕಿ ಲಕ್ಷ್ಮಣ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿ.ಬಿ.ನಿಂಗಯ್ಯ ಅವರು, ವಿರೋಧ ಪಕ್ಷದ ಶಾಸಕರಾಗಿದ್ದರೂ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಿ ಸಾಕಷ್ಟು ಅನುದಾನ ತಂದು, ಕ್ಷೇತ್ರದ ಅಭಿವೃದ್ಧಿ ಮಾಡಿರುವುದು ಜನರಿಗೆ ತಿಳಿದಿದೆ. ಹಿಂದೆಯೂ ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಮೂಡಿಗೆರೆ ಬಸ್ ಡಿಪೋ, ಎಪಿಎಂಸಿ ಯಾರ್ಡ್, ತೋಟಗಾರಿಕೆ ಮಹಾವಿದ್ಯಾಲಯ, ಮಿನಿ ವಿಧಾನಸೌಧ, ಎಂಜಿಎಂ ಆಸ್ಪತ್ರೆ ಅಭಿವೃದ್ಧಿ ಸಹಿತ ಹಲವು ಶಾಶ್ವತ ಯೋಜನೆಗಳನ್ನು ತಾಲೂಕಿಗೆ ತಂದಿರುವ ಕೀರ್ತಿ ಇದೆ. ಕಾಂಗ್ರೆಸ್ ವಾಮಮಾರ್ಗದ ಮೂಲಕ ಹೇಳಿಕೆ ನೀಡಿ, ಮೋಟಮ್ಮ ಅವರನ್ನು ಗೆಲ್ಲಿಸಲು ಹೊರಟಿದೆ. ಯಾವುದೇ ಕೆಲಸ ಮಾಡದ ಕಾಂಗ್ರೆಸ್ ಚುನಾವಣೆಯಲ್ಲಿ ಯಾವ ಮುಖವನ್ನಿಟ್ಟುಕೊಂಡು ಜನರಲ್ಲಿ ಮತಯಾಚಿಸುತ್ತಿದೆ ? ಕಾಂಗ್ರೆಸ್‍ನ ಗೆಲುವು ಹಗಲುಗನಸು ಎಂದು ಲೇವಡಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಅವರಿಗೆ ಕ್ಷೇತ್ರದ ಎಲ್ಲಾ ವರ್ಗದ ಮತದಾರರ ಬೆಂಬಲವಿದೆ. ಮುಂದಿನ ಬಾರಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದು ರೈತರ ಸಾಲ ಸಂಪೂರ್ಣ ಮನ್ನಾ ಆಗಲಿದೆ. ಇದರಿಂದ ಪ್ರೇರಿತಗೊಂಡ ರೈತರು ಶೇ.100ರಷ್ಟು ಜೆಡಿಎಸ್ ಬೆಂಬಲಕ್ಕಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಈ ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿಗಳು. ಅವರ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ನಡೆಸಲಾಗಿದೆ. ಬಿ.ಬಿ.ನಿಂಗಯ್ಯ ಅವರ ಅವಧಿಯಲ್ಲಿ ಆದ ಅಭಿವೃದ್ಧಿಯಿಂದ ಕಾಂಗ್ರೆಸ್ ಕಂಗೆಟ್ಟಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸಾಧ್ಯವೇ ಇಲ್ಲವೆಂಬಂತಾಗಿದೆ. ಹೀಗಾಗಿ ಮೋಟಮ್ಮ ಅವರು ತಮ್ಮ ಅಣ್ಣನ ಮಗ ಅನಂತ್ ಅವರ ಮೂಲಕ ಜೆಡಿಎಸ್ ವಿರುದ್ಧ ಕ್ಷುಲ್ಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಇಬ್ಬರು ಹಿಂಬಾಲಕರ ವಿರುದ್ಧ ಕಾಂಗ್ರೆಸ್‍ನಲ್ಲಿ ಅಸಮಾಧಾನ ಮುಗಿಲುಮುಟ್ಟಿದೆ. ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ಪರಸ್ಪರ ಜಗಳವಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಚುನಾವಣೆ ಉಸ್ತುವಾರಿ ವಹಿಸದೆ ಬೇರೆ ಇಬ್ಬರು ಹಿರಿಯ ಮುಖಂಡರಿಗೆ ವಹಿಸಲಾಗಿದೆ. ನಾಮಕಾವಸ್ಥೆಗೆ ಮಾತ್ರ ಬ್ಲಾಕ್ ಅಧ್ಯಕ್ಷರನ್ನು ಇಟ್ಟುಕೊಳ್ಳಲಾಗಿದೆ. ಇದು ಕಾಂಗ್ರೆಸ್‍ನ ಗುಂಪುಗಾರಿಕೆಯಲ್ಲವೇ? ಇದನ್ನು ಮೊದಲು ಸರಿಪಡಿಸಿ, ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.







