ಗೋರಖ್‌ಪುರ: ಡಾ ಕಫೀಲ್‌ಖಾನ್‌ಗೆ ಜಾಮೀನು ಮಂಜೂರು

ಲಕ್ನೊ, ಎ.25: ಉತ್ತರಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ವರ್ಷ ಸಂಭವಿಸಿದ ಮಕ್ಕಳ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಡಾ. ಕಫೀಲ್ ಖಾನ್‌ಗೆ ಅಲಹಾಬಾದ್ ಹೈಕೋರ್ಟ್ ಬುಧವಾರ ಜಾಮೀನು ಮಂಜೂರುಗೊಳಿಸಿದೆ.
ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಕಾರಣ ಆರೋಪಿ ಜೈಲಿನಲ್ಲಿರುವ ಅಗತ್ಯವಿಲ್ಲ ಎಂದು ಏಕಸದಸ್ಯ ಪೀಠದ ನ್ಯಾಯಾಧೀಶ ಯಶವಂತ್ ವರ್ಮ ಅಭಿಪ್ರಾಯಪಟ್ಟರು. ಡಾ. ಖಾನ್ ಕುಟುಂಬ ಕಳೆದ ಏಳು ತಿಂಗಳಲ್ಲಿ ಆರು ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದೆ. ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಆಮ್ಲಜನಕದ ಕೊರತೆಯ ಕಾರಣ ಹಲವು ಮಕ್ಕಳು ಮೃತಪಟ್ಟಿದ್ದವು. ಈ ಪ್ರಕರಣದಲ್ಲಿ 9 ಆರೋಪಿಗಳ ಪೈಕಿ ಡಾ ಖಾನ್ ಒಬ್ಬರಾಗಿದ್ದಾರೆ. ಇವರ ವಿರುದ್ಧದ ಭ್ರಷ್ಟಾಚಾರ ಹಾಗೂ ಖಾಸಗಿಯಾಗಿ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿರುವ ದೂರನ್ನು ಗೋರಖ್‌ಪುರ ಪೊಲೀಸರು ಈಗಾಗಲೇ ರದ್ದುಗೊಳಿಸಿದ್ದಾರೆ.
ಕಳೆದ ವಾರ ದಿಲ್ಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಡಾ. ಖಾನ್‌ರ ಪತ್ನಿ ಡಾ ಶಬಿಸ್ತಾ ಖಾನ್, ತನ್ನ ಪತಿಗೆ ಜೈಲು ಅಧಿಕಾರಿಗಳು ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸುತ್ತಿಲ್ಲ. ಹೃದಯ ರೋಗಿಯಾಗಿರುವ ತನ್ನ ಪತಿಗೆ ವೈದ್ಯಕೀಯ ಕಾರಣದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದರು.
ಇದಕ್ಕೂ ಮುನ್ನ ಆರೋಗ್ಯ ತಪಾಸಣೆಗೆಂದು ತನ್ನನ್ನು ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಾ ಕಫೀಲ್ ಖಾನ್, ಓರ್ವ ವೈದ್ಯರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಆಡಳಿತ ವರ್ಗ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಆರೋಪಿಸಿದ್ದರು.







