ಕಾಂಗ್ರೆಸ್ ಅಭ್ಯರ್ಥಿ ಡಾ.ಶ್ರೀನಿವಾಸ್‌ರಿಂದ ತಪ್ಪು ಮಾಹಿತಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಎ.25: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಶ್ರೀನಿವಾಸ್ ಕರಿಯಣ್ಣ ಅವರು ತಮ್ಮ ಸರಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಯುಕ್ತರು ಮತ್ತು ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಎಂ.ಕೆ.ಬಲದೇವಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ, ಸರಕಾರದೊಂದಿಗೆ ಡಾ.ಶ್ರೀನಿವಾಸ್ ಕರಿಯಣ್ಣ ಅವರಿಗೂ ನೋಟಿಸ್ ಜಾರಿಗೆ ಆದೇಶಿಸಿತು. ಅಲ್ಲದೆ, ಶ್ರೀನಿವಾಸ್ ಅವರು ಅರ್ಜಿಯ ಅಂತಿಮ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಮಧ್ಯಂತರ ನಿರ್ದೇಶನ ನೀಡಿದೆ.
ಶ್ರೀನಿವಾಸ್ ಅವರು ಬೆಂಗಳೂರಿನ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿತ್ತು. ಇದರಿಂದ ಶ್ರೀವಾಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಬಲದೇವ ಕೃಷ್ಣ, ಶ್ರೀನಿವಾಸ್ ಅವರು ತಮ್ಮ ಸರಕಾರಿ ಹುದ್ದೆಗೆ ರಾಜೀನಾಮೆ ಪತ್ರ ನೀಡುವಾಗ ಹಿಂದಿನ ದಿನಾಂಕವನ್ನು ನಮೂದಿಸಿದ್ದಾರೆ. ಆ ಮೂಲಕ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ, ಈ ಕ್ರಮ ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ.







