ಘಟಕ ಕಾಲೇಜುಗಳಾಗಿ ಮಾರ್ಪಡಿಸಲು ಸರಕಾರಕ್ಕೆ ಪತ್ರ: ಪ್ರೊ.ಎಸ್.ಜಾಫೆಟ್
ಬೆಂಗಳೂರು, ಎ.25: ರಾಜಧಾನಿ ಬೆಂಗಳೂರಿನಲ್ಲಿರುವ ಸರಕಾರಿ ಕಲಾ ಕಾಲೇಜು, ವಿಜ್ಞಾನ ಕಾಲೇಜು, ಮಹಾರಾಣಿ ಕಾಲೇಜುಗಳನ್ನು ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ಜಾಫೆಟ್ ತಿಳಿಸಿದ್ದಾರೆ.
ಬುಧವಾರ ನಗರದ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಎನ್‌ಸಿಸಿ, ಎನ್‌ಎಸ್‌ಎಸ್, ರೇಂಜರ್ಸ್ ಮತ್ತು ರೋವರ್ಸ್ ಹಾಗೂ ಇತರೆ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಆಸುಪಾಸಿನಲ್ಲಿರುವ ಕಾಲೇಜುಗಳನ್ನು ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ ಘಟಕ ಕಾಲೇಜುಗಳನ್ನಾಗಿ ಮಾರ್ಪಾಡು ಮಾಡಲು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈ ಕಾಲೇಜುಗಳು ಘಟಕ ಕಾಲೇಜುಗಳಾಗಿ ಬದಲಾದರೆ ಬೆಂಗಳೂರು ಕೇಂದ್ರೀಯ ವಿವಿ ಇನ್ನಷ್ಟು ಬಲಗೊಳ್ಳಲಿದೆ ಎಂದರು.
ರಾಜ್ಯದಲ್ಲಿರುವ ಸಂಶೋಧನ ಸಂಸ್ಥೆಗಳು ಒಳಮುಖಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ, ಸ್ಥಳೀಯ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತದೆ ವಿಶ್ವ ಮತ್ತು ರಾಷ್ಟ್ರ ಮಟ್ಟದ ವಿಷಯಗಳತ್ತ ಚಿತ್ತ ಹರಿಸಿದ್ದು, ರಾಜ್ಯದೊಂದಿಗೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿವೆ ಎಂದು ವಿಷಾದಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 240 ಕಾಲೇಜುಗಳಲ್ಲಿ ವಿಭಾಗವಾರು ಅಧ್ಯಯನ ಕೇಂದ್ರಗಳನ್ನು ಆರಂಭಿಸಲು ಚಿಂತಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಅಲ್ಲದೇ, ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಘೋಷಣೆ ಮಾಡುವುದು ಬೇಡ ಎಂದು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ಜಿ.ಲೋಕೇಶ್, ಸರಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಂ.ವೆಂಕಟಶಾಮಿ ರೆಡ್ಡಿ, ಗಾಯಕ ಕೆ.ಗೋವಿಂದ್, ಅಧ್ಯಾಪಕರಾದ ಮಹೇಶ್, ಗೋವಿಂದಯ್ಯ ಮತ್ತಿತರರು ಇದ್ದರು.







