ಮಾಯಾವತಿ ಸಮಾವೇಶದ ಎಫೆಕ್ಟ್ ನಮಗೆ ಇಲ್ಲ: ಸಿದ್ದರಾಮಯ್ಯ

ಮೈಸೂರು,ಎ.25: ಬಾದಾಮಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅಲ್ಲಿನ ಜನರಿಂದ ಬಾರೀ ಬೆಂಬಲ ವ್ಯಕ್ತವಾಗಿದೆ. ನಾನು ಬಾದಾಮಿಗೆ ಒಂದು ದಿನ ಪ್ರಚಾರಕ್ಕೆ ಹೋಗುತ್ತೇನೆ. ಎ.26 ರಂದು ರಾಹುಲ್ ಗಾಂಧಿ ಉತ್ತರ ಕರ್ನಾಟಕ್ಕೆ ಬರುತ್ತಾರೆ. ಹೊನ್ನಾವರ, ಬಂಟ್ವಾಳ, ಮುರುಡೇಶ್ವರ ಸೇರಿ ಹಲವು ಕಡೆ ಪ್ರವಾಸ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿ ಮೈಸೂರಿಗೆ ಆಗಮಿಸಿದ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ಚರಿ ಪ್ರವಾಸ ಇವತ್ತಿಗೆ ಮುಗಿಯಲಿದೆ. ಕೊನೆಯ ಎರಡು ದಿನ ಮಾತ್ರ ಚಾಮುಂಡೇಶ್ಚರಿ ಪ್ರವಾಸ ಮಾಡುತ್ತೇನೆ. ಈಗಾಗಲೇ 150 ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಎಲ್ಲಿ ಸಮಸ್ಯೆ ಇದೆ ಅಲ್ಲಿ ಹೋಗುತ್ತೇನೆ. ಕರ್ನಾಟಕದ ದಲಿತರು ನಮ್ಮ ಪರ ಇದ್ದಾರೆ ಎಂದರು.
ಮೈಸೂರಿನಲ್ಲಿ ಮಾಯಾವತಿ ಸಮಾವೇಶ ಎಫೆಕ್ಟ್ ನಮಗಿಲ್ಲ. ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಿಂದ ಯಾರೇ ನಿಂತರೂ ನಾವೇ ಗೆಲ್ಲುತ್ತೇವೆ ಎಂದು ನಾನು ಮೊದಲೇ ಹೇಳಿದ್ದೆ. ಯಡಿಯೂರಪ್ಪ ನಿಂತಿದ್ದರೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಬಿಜೆಪಿ ಕೈ ಜೋಡಿಸಿದೆ. ಜೆಡಿಎಸ್, ಬಿಜೆಪಿ ಅನೌಪಚಾರಿಕ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಾನು ವರುಣಾದಲ್ಲಿ ಪ್ರಚಾರಕ್ಕೆ ಹೋಗಲ್ಲ. ನಮ್ಮದು ಅಪ್ಪ ಮಕ್ಕಳ ಪಕ್ಷ ಅಲ್ಲ ಎಂದ ಅಮಿತ್ ಶಾ ಟ್ವಿಟ್ ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಜನ ಬಿಜೆಪಿಯವರನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಯಡಿಯೂರಪ್ಪ, ಕಾರಾಜೋಳ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಿಲ್ವ. ಅವರೆಲ್ಲಾ ಏನು ಎಂದು ಪ್ರಶ್ನಿಸಿದರು.
ನಾನು ಸಮೀಕ್ಷೆ ನಂಬಲ್ಲ. ಕರ್ನಾಟಕದ ಜನರ ನಾಡಿ ಮಿಡಿತ ಗೊತ್ತಿದೆ. ಈ ಬಾರಿ ನಮ್ಮ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ನನಸಾಗೋ ಕನಸನ್ನು ಕುಮಾರಸ್ವಾಮಿ ಕಾಣುತ್ತಿಲ್ಲ. ಕಾಂಗ್ರೆಸ್ ಪಾರ್ಟಿಯನ್ನು ಜನ ಜಾತ್ಯಾತೀತವಾಗಿ ಬೆಂಬಲಿಸಲಿದ್ದಾರೆ. ಸಮಯ ಸಿಕ್ಕರೆ ವರುಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.
ಪ್ರೊ.ಮಹೇಶ್ ಚಂದ್ರ ಗುರು ಹಾಗೂ ಅರವಿಂದ್ ಮಾಲಗತ್ತಿ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ನನ್ನ ಪರವಾಗಿ ಪ್ರಚಾರ ಮಾಡುತ್ತಿರಲಿಲ್ಲ. ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆ ನಡೆಸುತ್ತಿದ್ದರು. ಅದರಲ್ಲಿ ನನ್ನ ಮಗ ಯತೀಂದ್ರ ಭಾಗವಹಿಸಿದ್ದರು. ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು ಸಭೆ ನಡೆಸಿದರೆ ತಪ್ಪೇನು. ಅದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಅದೊಂದು ಖಾಸಗಿ ಕಾರ್ಯಕ್ರಮ ಎಂದರು.







