ಧರ್ಮ-ಅಧರ್ಮಗಳ ಮಧ್ಯೆ ಈ ಬಾರಿಯ ಚುನಾವಣೆ: ಸಂಸದ ರಾಘವನ್
ಮೈಸೂರು,ಎ.25: ಹಿಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಧರ್ಮ ಮತ್ತು ಅಧರ್ಮಗಳ ಮಧ್ಯೆ ನಡೆಯುತ್ತಿರುವ ಚುನಾವಣೆ ಎಂದು ಸಂಸದ ಹಾಗೂ ಎಐಸಿಸಿಯ ಜಿಲ್ಲಾ ವೀಕ್ಷಕ ರಾಘವನ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಲ್ಲಿ ಹಣ, ಹೆಂಡ ಪ್ರಧಾನ ಪಾತ್ರವಹಿಸಿದರೆ, ಈ ಬಾರಿಯ ಚುನಾವಣೆ ಧರ್ಮ-ಅಧರ್ಮಗಳಿಗೆ ಸಂಬಂಧಿಸಿದ್ದಾಗಿದೆ. ಯಾವತ್ತಿದ್ದರೂ ಧರ್ಮಕ್ಕೆ ಜಯ ಎಂಬಂತೆ ಈ ಬಾರಿಯೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಯಾವ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬುದನ್ನು ಮತದಾರರೇ ನಿರ್ಧರಿಸುತ್ತಾರೆ. ಈ ದಿಸೆಯಲ್ಲಿ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲಾದ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳು ಸೇರಿದಂತೆ ಅನೇಕ ಜನಪರ ಯೋಜನೆಗಳು ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಓರ್ವ ಸ್ವಚ್ಛ ಹಾಗೂ ಶಕ್ತಿಶಾಲಿ ವ್ಯಕ್ತಿಯಾಗಿದ್ದು, ರಾಜ್ಯದ ಪ್ರಗತಿಗಾಗಿ ಶ್ರಮಿಸಿದವರಾಗಿದ್ದಾರೆ. ಅವರೇ ಭ್ರಷ್ಟಾಚಾರ ವಿರುದ್ಧ ಅವಿರತವಾಗಿ ಹೋರಾಟ ನಡೆಸಿ ರಾಜ್ಯವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಿದ್ದಾರೆ. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ನನ್ನ ಅನುಭವಕ್ಕೆ ಬಂದಿರುವಂತೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು 130 ಸ್ಥಾನಗಳಿಸಿ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ. 2013ರ ಚುನಾವಣಾ ಸಂಭರ್ದದಲ್ಲಿ ನಾನು ಹಾಸನ ಜಿಲ್ಲಾ ವೀಕ್ಷಕನಾಗಿದ್ದಾಗ ಅಲ್ಲಿನ 3, 4 ಮಂದಿ ಏಜೆಂಟರುಗಳು ಕಾಂಗ್ರೆಸ್ ಪಕ್ಷವು 80 ರಿಂದ 90 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯ ಎಂದು ಹೇಳಿದರು. ಆದರೆ ಆ ಚುನಾವಣೆಯಲ್ಲಿ ತಮ್ಮ ಪಕ್ಷವು 122 ಸ್ಥಾನಗಳನ್ನು ಗಳಿಸಿ ಆಡಳಿತದ ಚುಕ್ಕಾಣಿ ಹಿಡಿದಿತ್ತು ಎಂಬುದನ್ನು ನೆನಪು ಮಾಡಿಕೊಂಡ ಅವರು, ಈ ಬಾರಿಯೂ ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳಲಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅವಕಾಶವಾದಿ ಪಕ್ಷಗಳಾಗಿದ್ದು, ಈ ಪಕ್ಷದೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದ್ದು, ಅಪ್ಪ ಮಕ್ಕಳ ಪಕ್ಷವೆಂದೇ ಗುರುತಿಸಿಕೊಂಡಿದೆ. ಈ ಪಕ್ಷದ ಬಗ್ಗೆ ರಾಜ್ಯದ ಜನತೆ ನಂಬಿಕೆ ಕಳೆದುಕೊಂಡಿರುವುದರಿದ ಅದು ಅಧಿಕಾರಕ್ಕೆ ಬರುವುದಾದರೂ ಹೇಗೆ ಎಂದು ರಾಘವನ್ ಪಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಡಾ.ಬಿ.ವಿ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಇತರರು ಉಪಸ್ಥಿತರಿದ್ದರು.







