ಅಪಪ್ರಚಾರವೇ ಬಿಜೆಪಿಯ ಬಂಡವಾಳ: ಡಾಮಿನಿಕ್ ಪ್ರಸಂಟೇಶನ್
ಉಡುಪಿ, ಎ.25: ಅಪಪ್ರಚಾರವೇ ಬಿಜೆಪಿಗೆ ದೊಡ್ಡ ಬಂಡವಾಳವಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಕಂಡಾಗ ಪ್ರತಿಭಟಿಸುತ್ತಿದ್ದ ಬಿಜೆಪಿ, ಸದ್ಯ ತನ್ನ ಆಡಳಿತದಲ್ಲಿ ನಿರಂತರವಾಗಿ ಬೆಲೆ ಏರಿಕೆ ಕಂಡರೂ ಮೌನವಹಿಸಿ ತನಗೂ ಬೆಲೆ ಏರಿಕೆಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ಜನತೆ ನಿಧಾನವಾಗಿ ಕೇಂದ್ರ ಸರಕಾರದ ಸುಳ್ಳು ಭರವಸೆಗಳಿಂದ ಮೋಸ ಹೋಗಿದ್ದೇವೆ ಎಂಬುದನ್ನು ಅರಿತುಕೊಳ್ಳತೊಡಗಿದ್ದಾರೆ ಎಂದು ಎಐಸಿಸಿ ಯಿಂದ ಉಡುಪಿ ಜಿಲ್ಲೆಗೆ ಚುನಾವಣಾ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಕೇರಳದ ಮಾಜಿ ಸಚಿವ ಹೇಳಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರುಗಿದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕರಾವಳಿ ಪ್ರದೇಶದಿಂದ ಅತೀ ಹೆಚ್ಚು ಶಾಸಕರು ಆಯ್ಕೆಯಾಗಬೇಕೆಂಬುದು ಹೈಕಮಾಂಡಿನ ಅಪೇಕ್ಷೆಯಾಗಿದ್ದು, ಇದಕ್ಕೆ ಪೂರಕ ವಾಗಿ ಜಿಲ್ಲಾ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳು ತೊಡಗಿಸಿಕೊಳ್ಳಬೇಕಾಗಿದೆ ಎಂದರು.
60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎನ್ನುವವರ ಜೀವನ ಮಟ್ಟವು ಇಂದು ಏರಿಕೆ ಕಂಡಿರುವುದನ್ನು ನಾವು ಕಾಣುತ್ತಿದ್ದೇವೆ. ದೇಶದ ಪ್ರಗತಿಗೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ನಾವು ಜನತೆಗೆ ಮನವರಿಕೆ ಮಾಡಿ ಕೊಡಬೇಕಾಗಿದೆ. ಇಲ್ಲದೇ ಹೋದಲ್ಲಿ ಬಿಜೆಪಿಯ ಸುಳ್ಳನ್ನೇ ಸತ್ಯ ಎಂದು ಜನತೆ ನಂಬುವಂತಾಗುವುದು. ಬಿಜೆಪಿಯ ಸುಳ್ಳು ಮಾಹಿತಿಗಳಿಗೆ ಸೂಕ್ತ ಉತ್ತರ ನೀಡುವಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಕರೆ ನೀಡಿದರು.
ಸಭೆಯಲ್ಲಿ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಗೋಪಾಲ ಭಂಡಾರಿ, ಕುಂದಾಪುರ ಕ್ಷೇತ್ರದ ಅಭ್ಯರ್ಥಿ ರಾಕೇಶ್ ಮಲ್ಲಿ ಹಾಗೂ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಯು.ಆರ್.ಸಭಾಪತಿ, ಭರತ್ ಮುಂಡೋಡಿ, ಹಿರಿಯಣ್ಣ, ಕೃಷ್ಣರಾಜ್ ಸರಳಾಯ, ಮಲ್ಯಾಡಿ ಶಿವರಾಮ ಶೆಟ್ಟಿ, ಸುಧಾಕರ ಕೋಟ್ಯಾನ್, ಸತೀಶ್ ಅಮೀನ್ ಪಡುಕರೆ, ಸುಧೀರ್ ಹೆಗ್ಡೆ, ನೀರೆ ಕೃಷ್ಣ ಶೆಟ್ಟಿ, ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಅಶೋಕ್ ಕುಮಾರ್ ಕೊಡವೂರು, ಡಾ. ಸಂತೊಷ್ ಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಳೆಬೈಲ್, ಕಾಪು ದಿವಾಕರ ಶೆಟ್ಟಿ, ಮನೋಜ್ ಕರ್ಕೇರ, ದಿವಾಕರ ಕುಂದರ್, ಪ್ರಖ್ಯಾತ್ ಶೆಟ್ಟಿ, ವಾಸುದೇವ ಯಡಿಯಾಳ್, ದೇವಕಿ ಸಣ್ಣಯ್ಯ, ಮಲ್ಲಿಕಾ ಪೂಜಾರಿ, ಭಾಸ್ಕರ್ ರಾವ್ ಕಿದಿಯೂರು, ಹರೀಶ್ ಶೆಟ್ಟಿ ಪಾಂಗಳ, ಸುರೇಶ್ ನಾಯ್ಕಿ, ಹಬೀಬ್ ಅಲಿ, ಬಾಲಕೃಷ್ಣ ಪೂಜಾರಿ, ಜನಾರ್ದನ ಭಂಡಾರ್ಕಾರ್, ಮಹಾಬಲ ಕುಂದರ್, ಡಾ. ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ವಂದಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.







