ಬೆಂಗಳೂರು: ಖಾಸಗಿ ಬಸ್ ಢಿಕ್ಕಿ; ಯುವತಿ ಮೃತ್ಯು

ಬೆಂಗಳೂರು, ಎ.25: ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ತಿಂಡ್ಲುವಿನ ಚೈತ್ರಾ(21) ಮೃತಪಟ್ಟಿರುವ ಯುವತಿಯಾಗಿದ್ದು, ಘಟನೆಯಲ್ಲಿ ಸಂಜಯ್ ಎಂಬಾತ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರು ಗುರುತಿಸಿದ್ದಾರೆ.
ಕಾವೇರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಸಂಜಯ್ ಹಾಗೂ ಚೈತ್ರಾ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರು ರಾಜಾಜಿನಗರದಲ್ಲಿ ನಡೆಯುತ್ತಿದ್ದ ತಮ್ಮ ಕಾಲೇಜಿನ ಉಪನ್ಯಾಸಕರೊಬ್ಬರ ವಿವಾಹಕ್ಕೆ ರಾತ್ರಿ 9 ರ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದರು, ಮಾರ್ಗ ಮಧ್ಯೆ ವೆಸ್ಟ್‌ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಸ್ಥಾನದ ಬಳಿ ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕೆಳಗೆಬಿದ್ದ ಚೈತ್ರಾ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದು ಮೃತಪಟ್ಟಿದ್ದು ಸಂಜಯ್ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಸಂಚಾರ ಪೊಲೀಸರು ಬಸ್ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.





