ಬಿಜೆಪಿ ಅಭ್ಯರ್ಥಿ ಸಿದ್ದರಾಜು ಪಡೆಯುವ ಲಾಭಗಳು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ: ಹೈಕೋರ್ಟ್

ಬೆಂಗಳೂರು, ಎ.25: ಮೈಸೂರಿನ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದರಾಜು ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ನಾಯಕ (ಪರಿಶಿಷ್ಟ ಪಂಗಡ) ಜಾತಿಪ್ರಮಾಣ ಪತ್ರ ಸಲ್ಲಿಸಿ ಪಡೆಯುವ ಯಾವುದೇ ಲಾಭಗಳು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹಿಂದುಳಿದ ವರ್ಗವಾದ ಬೆಸ್ತ (ಗಂಗಾ ಮತಸ್ಥರು) ಜಾತಿಗೆ ಸೇರಿರುವ ಸಿದ್ದರಾಜು, ಪರಿಶಿಷ್ಟ ಪಂಗಡವಾದ ನಾಯಕ ಜಾತಿಗೆ ಸೇರಿರುವುದಾಗಿ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಎಸ್.ಸುಭಾಷ್ ಎಂಬುವರು ನೀಡಿದ್ದ ದೂರಿನ ಆಧಾರದ ಮೇಲೆ ಮೈಸೂರು ತಹಸೀಲ್ದಾರ್ ಸಿದ್ದರಾಜು ಅವರ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿದ್ದರು.
ಈ ಕ್ರಮವನ್ನು ಪ್ರಶ್ನಿಸಿ ಸಿದ್ದರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಹಶೀಲ್ದಾರ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತಲ್ಲದೆ, ಸಿದ್ದರಾಜು ಅವರಿಗೆ ನಾಯಕ ಜಾತಿಗೆ ಸೇರಿದ ಪ್ರಮಾಣಪತ್ರವನ್ನು ಹೊಸದಾಗಿ ನೀಡುವಂತೆ ಎ.5ರಂದು ಮಧ್ಯಂತರ ಆದೇಶ ನೀಡಿತ್ತು.
ಈ ಮಧ್ಯೆ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ದೂರುದಾರ ಸುಭಾಷ್ ಸಹ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠ, ಸಿದ್ದರಾಜು ಅವರಿಗೆ ಹೊಸದಾಗಿ ಜಾತಿ ಪ್ರಮಾಣಪತ್ರ ನೀಡುವಂತೆ ಈ ಹಿಂದೆ ಹೈಕೋರ್ಟ್ ಹೊರಡಿಸಿರುವ ಮಧ್ಯಂತರ ಆದೇಶದ ಆಧಾರದ ಮೇಲೆ ಅವರು ಪಡೆಯುವ ಯಾವುದೇ ಲಾಭಗಳು, ಈ ತಕರಾರು ಅರ್ಜಿಯ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು ಜೂನ್ ಎರಡನೆ ವಾರಕ್ಕೆ ಮುಂದೂಡಿತು.







