ತರೀಕೆರೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಜಿ.ಹೆಚ್ ಶ್ರೀನಿವಾಸ್

ತರೀಕೆರೆ, ಎ.25: ಕಳೆದ 5 ವರ್ಷಗಳ ಅವಧಿಯಲ್ಲಿ ತರೀಕೆರೆ ಕ್ಷೇತ್ರವನ್ನು ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಯಲ್ಲಿ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿಯೇ ಕ್ಷೇತ್ರ 2 ನೇ ಸ್ಥಾನದಲ್ಲಿದೆ ಎಂದು ಜಿ.ಹೆಚ್ ಶ್ರೀನಿವಾಸ್ ಹೇಳಿದರು.
ಅವರು ಇಂದು ತರೀಕೆರೆಯಲ್ಲಿ ಬೃಹತ್ ಬಲಪ್ರದರ್ಶನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ನಾನು ಕಳೆದ ಐದು ವರ್ಷಗಳಿಂದ 2500 ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಪಡಿಸಿದ್ದೇನೆ. ರಸ್ತೆಗಳ ಸಮರ್ಪಕ ನಿರ್ವಹಣೆ ಮಾಡುವುದಲ್ಲದೆ ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಮುಂದಿನ ದಿನಗಳಲ್ಲಿ ತರೀಕೆರೆ ಕ್ಷೇತ್ರ ಹಸಿರು ಮಯವಾಗುವಂತೆ ಮಾಡುವ ಪ್ರಯತ್ನ ಮಾಡಿರುತ್ತೇನೆ. ಇಷ್ಟೆಲ್ಲ ಅಭಿವೃದ್ದಿ ಮಾಡಿರುವ ನಾನು ಈ ಬಾರಿ ತರೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಮುಂದಾದಾಗ ಸ್ವಜಾತಿಯವರೆ ಮುಂದಿನ ದಿನಗಳಲ್ಲಿ ನಾನು ಶಾಸಕನಾಗಿ ಆಯ್ಕೆಯಾದರೆ ಈ ಕ್ಷೇತ್ರದಲ್ಲಿ ನಿರಂತರವಾಗಿ ನನ್ನ ಆಯ್ಕೆಯಾಗುತ್ತದೆ ಎಂದು ಮನಗಂಡು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಬಳಿ ನನ್ನ ಬಗ್ಗೆ ಇಲ್ಲಸಲ್ಲದ ದೂರು ಮತ್ತು ಆರೋಪಗಳನ್ನು ಮಾಡಿದರು. ಶ್ರೀನಿವಾಸ್ ರವನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಕಾಂಗ್ರೆಸ್ ಪಕ್ಷದಿಂದ ಟಿಕೇಟು ನೀಡಿ ಎಂದು ಹೇಳಿದ್ದರಿಂದ ನನಗೆ ಈ ಬಾರಿ ಟಿಕೇಟು ಕೈತಪ್ಪಿತು. ಆದರೆ ಮಾನ್ಯ ಸಿದ್ದರಾಮಯ್ಯ ನವರು ಕಳೆದು ಆರೇಳು ತಿಂಗಳ ಹಿಂದೆಯೇ ಮತ್ತು ಕಾಂಗ್ರೆಸ್ ಪಕ್ಷೆದ ಜನಾಶೀರ್ವಾದ ಯಾತ್ರೆಗೆ ಅಜ್ಜಂಪುರಕ್ಕೆ ಬಂದಾಗ 2018 ರ ಚುನಾವಣೆಯಲ್ಲಿ ತರೀಕೆರೆ ಕ್ಷೇತ್ರಕ್ಕೆ ನಿನ್ನನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತೇವೆಂದು ಭರವಸೆ ನೀಡಿದ್ದರು. ಈ ಒಂದು ಮಾತಿನಿಂದ ನಾನು ಪದೇ ಪದೇ ಬೆಂಗಳೂರಿಗೆ ಭೇಟಿ ನೀಡಿ ವರಿಷ್ಠರಿಗೆ ಟಿಕೇಟು ನೀಡಿ ಎಂದು ಕೇಳುವ ವಿಚಾರದಲ್ಲಿ ಹಿಂದೆ ಬಿದ್ದುದ್ದರಿಂದ ಇಂದು ನನಗೆ ಮೋಸವಾಯಿತು. ತದ ನಂತರದಲ್ಲಿ ನಾನು ಕ್ಷೇತ್ರದ ಕಾರ್ಯಕರ್ತರ ಅಭಿಮಾನದ ಒತ್ತಡಕ್ಕೆ ಮಣಿದು ಜೆ.ಡಿ.ಎಸ್. ಪಕ್ಷ ಸೇರೋಣವೆಂದು ನಿರ್ಧಾರ ಮಾಡಿದೆ. ಆದರೆ ಅಲ್ಲಿಯೂ ಕೂಡ ನನಗೆ ಮೋಸವಾಯಿತು. ಇದಕ್ಕಾಗಿ ಕ್ಷೇತ್ರದ ಕಾರ್ಯಕರ್ತರಲ್ಲಿ ಕ್ಷಮೇಯಾಚಿಸುತ್ತೇನೆ ಎಂದು ತಿಳಿಸಿದರು.
ಈ ಎಲ್ಲಾ ಬೆಳವಣಿಗೆಗಳ ನಂತರ ಕ್ಷೇತ್ರದ ಮತದಾರರು ಒತ್ತಡ ಹಾಕಿದ್ದರಿಂದ ಮತ್ತು ಸರಿ ಸುಮಾರು 54 ಸಾವಿರ ಕಾರ್ಯಕರ್ತ ಮತದಾರರು ಚುನಾವಣೆಗೆ ಸ್ಪರ್ಧಿಸಲೇ ಬೇಕು ಎಂದು ಹಠ ಹಿಡಿದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಡಿ. ರಾಜ್ಯದಲ್ಲಿ ಕೋಮುಗಲಭೆ ಉಂಟು ಮಾಡುವ ಬಿಜೆಪಿಯನ್ನು ದೂರ ಇಡಿ. ಕಳೆದ ಸಲ ನನಗೆ ಆಶೀರ್ವಾದ ಮಾಡಿ ನನ್ನನ್ನು ಹೇಗೆ ಗೆಲುವು ಸಾಧಿಸಲು ಕಾರಣರಾಗಿದ್ದರೊ ಅದೇ ರೀತಿ ಈ ಬಾರಿಯೂ ನನ್ನ ಗೆಲುವಿಗೆ ಸಹಕಾರ ನೀಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ವಾಣಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷರಾದ ಪರ್ವೀನ್ ತಾಜ್, ವರ್ಮ ಪ್ರಕಾಶ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಮೂರ್ತಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸೀತಾರಾಮ್, ಲಕ್ಕವಳ್ಳಿ ಭಾಗದ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಜಯ ಕರ್ನಾಟಕ ಸಂಘಟನೆಯ ಜಗದೀಶ್, ಮಾಜಿ ಪುರಸಭೆ ನಾಮಿನಿ ಸದಸ್ಯ ಗಂಗಾಧರ್, ಹಾಗೂ ಇತರರು ಇದ್ದರು.







