ಸಂವಿಧಾನದ ಉಳಿವಿಗೆ ಬಿ.ಎಲ್ ಶಂಕರ್ ಗೆಲುವು ಅನಿವಾರ್ಯ: ಸಂಸದ ಜೈರಾಂ ರಮೇಶ್

ಚಿಕ್ಕಮಗಳೂರು,ಎ.25: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಬಿ.ಎಲ್ ಶಂಕರ್ ರವರ ಗೆಲುವಿಗಾಗಿ ಪಾದಯಾತ್ರೆ ಮೂಲಕ ಸಂಸದ ಜೈರಾಂ ರಮೇಶ್ ಬುಧವಾರ ಮತ ಯಾಚಿಸಿದರು. ಅವರು ಚಿಕ್ಕಮಗಳೂರಿನ ಕೆಂಪನಹಳ್ಳಿ ಬಡಾವಣೆಯಲ್ಲಿ ಅಭ್ಯರ್ಥಿ ಶಂಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಶಂಕರ್ ಅವರಿಗೆ ಮತ ನೀಡುವಂತೆ ವಿನಂತಿಸಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಗೆ ರಾಜಕೀಯ ಭೂಪಟದಲ್ಲಿ ದೊಡ್ಡ ಸ್ಥಾನವಿದೆ. 1978ರಲ್ಲಿ ಇಂದಿರಾಗಾಂಧಿ ಅವರನ್ನು ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಬಾರಿ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ಭಾರತದ ಪ್ರಜಾಪ್ರಭುತ್ವದ ಉಳಿವು ಮತ್ತು ದೇಶದ ಸಾಮಾನ್ಯರ ಹಾಗೂ ದುಡಿಯುವ ಜನರ ಪರವಾದ ಆಡಳಿತವನ್ನು ನೀಡಲು ತಾವೆಲ್ಲಾ ಕಾರಣಕರ್ತರು. ಮೇ.12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ಡಾ.ಬಿ.ಎಲ್ ಶಂಕರ್ ರವರನ್ನು ಗೆಲ್ಲಿಸುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಉಳಿವಿಗೆ ಕಾರಣರಾಗಬೇಕೆಂದು ಕರೆ ನೀಡಿದರು.
ದೇಶದ ಜನ ಇಂದು ರಾಜಕಾರಣಿಗಳನ್ನು ಕಂಡು ಅಪಹಾಸ್ಯ ಮಾಡುತ್ತಿರುವುದಲ್ಲದೇ, ಇವರೆಲ್ಲರೂ ಭ್ರಷ್ಟಾಚಾರದ ಉಗಮ ಮತ್ತು ಬೆಳವಣಿಗೆಯ ಕೇಂದ್ರಗಳಾಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ಜನ ತಿಳಿದಂತೆ ರಾಜಕಾರಣಿಗಳು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದೌರ್ಜನ್ಯಗಳೊಂದಿಗೆ ರಾಜಕಾರಣವನ್ನೇ ಅಪಹಾಸ್ಯ ಗೊಳಪಡಿಸುತ್ತಿರುವುದು ಸಂಪೂರ್ಣ ಸತ್ಯವಲ್ಲದಿದ್ದರೂ ಹೊಗೆಯಾಡು ತ್ತಿರುವುದು ಸತ್ಯ. ಇಂತಹ ಕೂಪದಿಂದ ರಾಜಕಾರಣವನ್ನು ಹೊರತರಬೇಕೆಂದರೆ ಡಾ.ಶಂಕರ್ ರಂತಹ ರಾಜಕಾರಣಿಗಳು ಪ್ರಜಾಸತ್ತೆಯಲ್ಲಿ ಜನಪ್ರತಿನಿಧಿಗಳಾಗಿರಬೇಕು ಎಂದರು.
ಕಳೆದ ನಾಲ್ಕು ದಶಕಗಳಿಂದ ಕೈಕೊಳಕು ಮಾಡಿಕೊಳ್ಳದೆ ಅತ್ಯಂತ ಮೇಧಾವಿತನದಿಂದ ವಿಷಯಗಳ ಮಂಡನೆ ಚರ್ಚೆ ಮತ್ತು ತೀರ್ಮಾನಗಳ ಮೂಲಕ ಅಚ್ಚರಿ ಮೂಡಿಸುವ ವ್ಯಕ್ತಿತ್ವ ಶಂಕರ್ ಅವರದು. ಸದಾ ಜನರಿಗಾಗಿ ಈ ಪ್ರಜಾಪ್ರಭುತ್ವದ ಉಳಿವಿಗಾಗಿ ಮಿಡಿಯುವ ಶಂಕರ್ ರವರನ್ನು ಗೆಲ್ಲಿಸಲೇಬೇಕೆಂದು ಜನರಲ್ಲಿ ವಿನಂತಿ ಮಾಡಿಕೊಂಡರು.
ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್ ವಿಜಯಕುಮಾರ್, ಎಐಸಿಸಿ ಸದಸ್ಯ ಬಿ.ಎಂ ಸಂದೀಪ್, ಅರಣ್ಯ ವಿಹಾರಧಾಮಗಳ ಅಧ್ಯಕ್ಷ ಎ.ಎನ್ ಮಹೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಸೈಯದ್ ಅನೀಫ್, ಕೆಪಿಸಿಸಿ ಸದಸ್ಯ ಕೆಂಪನಹಳ್ಳಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ಕೆ.ವಿ.ಶಿವಕುಮಾರ್, ಸುಮಿತ್ ಕುಲಕರ್ಣಿ, ಉದಯಕುಮಾರ್, ಸಿಲ್ವಸ್ಟರ್, ರಸೂಲ್ ಖಾನ್, ಸೇರಿದಂತೆ ಅನೇಕರು ಇದ್ದರು.







