ಚಿಕ್ಕಮಗಳೂರು: ಮೂಲಸೌಕರ್ಯ ಒದಗಿಸದ ಆರೋಪ; ತಳಿಹಳ್ಳಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಚಿಕ್ಕಮಗಳೂರು, ಎ.25: ಜಿಲ್ಲೆಯ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಳಿಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಹಾಲಿ ಶಾಸಕರು ವಿಫಲರಾಗಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಬುಧವಾರ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೆರಿ ಆವರಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಚುನಾವಣೆ ಬಹಿಷ್ಕರಿಸುವ ಬಗ್ಗೆ ಮನವಿಯನ್ನು ಸಲ್ಲಿಸಿದ್ದು, ಮೂಡಿಗೆರೆ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿರುವ ವಸ್ತಾರೆ ಹೋಬಳಿಯ ತಳಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ವ್ಯವಸ್ಥೆ ಸೆರಿದಂತೆ ಚರಂಡಿ, ರಸ್ತೆ ಸೌಲಭ್ಯವಿಲ್ಲವಾಗಿದೆ. ಗ್ರಾಮದ ಸಮಸ್ಯೆಗಳ ಬಗ್ಗೆ ಕಳೆದ 5 ವರ್ಷಗಳಿಂದ ಕ್ಷೇತ್ರದ ಶಾಸಕರೂ ಸೇರಿದಂತೆ ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ, ದೂರು ನೀಡಲಾಗಿದೆ. ಆದರೆ ಯಾರೂ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿಲ್ಲ. ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮವು ಕುಗ್ರಾಮದಂತಾಗಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ಶಾಲಾ ಮಕ್ಕಳಿಗೆ ನಡೆದಾಡಲೂ ಸಧ್ಯವಾಗುತ್ತಿಲ್ಲ. ವಾಹನ ಸಂಚಾರವೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗ್ರಾಮಸ್ಥರ ಒಕ್ಕೊರಲ ತೀರ್ಮಾನದಂತೆ ಚುನಾವಣೆಯನ್ನು ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದೇವೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಗೌರಮ್ಮ, ಪುಟ್ಟಸ್ವಾಮಿ, ತಿಪ್ಪೇಗೌಡ, ಶೈಲಾ, ಸಬೀನಾ, ಕೃಷ್ಣೇಗೌಡ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.





