ಯುವ ವಲಸಿಗರ ಗಡಿಪಾರು ತಡೆಯುವ ಕಾನೂನು ರದ್ದು ಸರಿಯಲ್ಲ
ಅಮೆರಿಕ ನ್ಯಾಯಾಲಯದ ತೀರ್ಪು

ವಾಶಿಂಗ್ಟನ್, ಎ. 25: ಯುವ ವಲಸಿಗರನ್ನು ಗಡಿಪಾರಿನಿಂದ ತಡೆಯುವ ಕಾರ್ಯಕ್ರಮವನ್ನು ನಿಲ್ಲಿಸುವ ಟ್ರಂಪ್ ಆಡಳಿತದ ನಿರ್ಧಾರದ ವಿರುದ್ಧ ಫೆಡರಲ್ ನ್ಯಾಯಾಧೀಶರೊಬ್ಬರು ತೀರ್ಪು ನೀಡಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಆಂತರಿಕ ಭದ್ರತೆ ಇಲಾಖೆಯು ತಳೆದಿರುವ ನಿರ್ಧಾರವು ‘‘ಸ್ವೇಚ್ಛಾಚಾರದ ಮತ್ತು ಚಂಚಲ’’ ಸ್ವರೂಪದ್ದಾಗಿದೆ ಎಂದು ನ್ಯಾಯಾಧೀಶರು ಬಣ್ಣಿಸಿದ್ದಾರೆ.
ಡೆಫರ್ಡ್ ಆ್ಯಕ್ಷನ್ ಫಾರ್ ಚೈಲ್ಡ್‌ಹುಡ್ ಅರೈವಲ್ಸ್ (ಡಿಎಸಿಎ) ಕಾರ್ಯಕ್ರಮವನ್ನು ರದ್ದುಪಡಿಸುವ ನಿರ್ಧಾರವು ಕಾನೂನುಬಾಹಿರವಾಗಿದೆ ಹಾಗೂ ಅದನ್ನು ಕೈಬಿಡಬೇಕಾಗಿದೆ ಎಂದು ವಾಶಿಂಗ್ಟನ್ ಜಿಲ್ಲಾ ನ್ಯಾಯಾಧೀಶ ಜಾನ್ ಡಿ. ಬೇಟ್ಸ್ ಮಂಗಳವಾರ ನೀಡಿದ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಈ ಕಾರ್ಯಕ್ರಮವು ಕಾನೂನುಬಾಹಿರ ಎಂಬ ಕಾನೂನು ತೀರ್ಪನ್ನು ಆಧರಿಸಿ ಆಂತರಿಕ ಭದ್ರತೆ ಇಲಾಖೆಯು ಅದನ್ನು ರದ್ದುಪಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದರೆ, ಈ ಕಾನೂನು ತೀರ್ಪಿಗೆ ವಿವರಣೆ ನೀಡಲು ಸಾಧ್ಯವಾಗಿಲ್ಲ, ಹಾಗಾಗಿ, ಇಲಾಖೆಯ ನಿರ್ಧಾರಕ್ಕೆ ಅದು ಆಧಾರವಾಗಲಾರದು ಎಂದಿದ್ದಾರೆ.
ಡಿಎಸಿಎ ಕಾನೂನುಬಾಹಿರ ಎಂಬ ತನ್ನ ನಿರ್ಧಾರಕ್ಕೆ ಉತ್ತಮ ವಿವರಣೆಯನ್ನು ನೀಡಲು ಇಲಾಖೆಗೆ ನ್ಯಾಯಾಧೀಶರು 90 ದಿನಗಳ ಅವಕಾಶ ನೀಡಿದ್ದಾರೆ. ‘‘ಉತ್ತಮ ವಿವರಣೆ ನೀಡಲು ಇಲಾಖೆಗೆ ಸಾಧ್ಯವಾಗದಿದ್ದರೆ, ಅದು ನೂತನ ಹಾಗೂ ನವೀಕರಣ ಕೋರುವ ಡಿಎಸಿಎ ಅರ್ಜಿಗಳನ್ನು ಸ್ವೀಕರಿಸಬೇಕು’’ ಎಂದು ನ್ಯಾಯಾಧೀಶ ಬೇಟ್ಸ್ ತನ್ನ ತೀರ್ಪಿನಲ್ಲಿ ಬರೆದಿದ್ದಾರೆ.







