ಐಪಿಎಲ್: ಪಂಜಾಬ್ಗೆ 13 ರನ್ ಸೋಲು
ಹೈದರಾಬಾದ್, ಎ.26: ರಶೀದ್ ಖಾನ್(3-19), ಶಾಕಿಬ್ ಅಲ್ ಹಸನ್(2-18), ಬಾಸಿಲ್ ಥಾಂಪಿ (2-14) ಹಾಗೂ ಸಂದೀಪ್ ಶರ್ಮ(2-17) ದಾಳಿಗೆ ತತ್ತರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ನ 25ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 13 ರನ್ಗಳಿಂದ ಸೋಲುಂಡಿದೆ.
ಗುರುವಾರ ಗೆಲ್ಲಲು 133 ರನ್ ಗುರಿ ಪಡೆದ ಪಂಜಾಬ್ 19.2 ಓವರ್ಗಳಲ್ಲಿ 119 ರನ್ ಗಳಿಸಿ ಆಲೌಟಾಗಿದೆ. ಪಂಜಾಬ್ ಪರ ಲೋಕೇಶ್ ರಾಹುಲ್ 32, ಕ್ರಿಸ್ ಗೇಲ್ 23, ಮಯಾಂಕ್ ಅಗರ್ವಾಲ್ 12, ಕರುಣ್ ನಾಯರ್ 13, ಮುಜೀಬ್ರಹ್ಮಾನ್ ಔಟಾಗದೆ 10 ರನ್ ಗಳಿಸಿದರು. ಇದಕ್ಕೆ ಮೊದಲು ಅಂಕಿತ್ ಸಿಂಗ್ ರಾಜ್ಪೂತ್(5-14) ಅತ್ಯುತ್ತಮ ಬೌಲಿಂಗ್ ದಾಳಿಗೆ ಸಿಲುಕಿದ ಹೈದರಾಬಾದ್ ತಂಡ ಪಂಜಾಬ್ ವಿರುದ್ಧ 6 ವಿಕೆಟ್ಗಳ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇನಿಂಗ್ಸ್ನ ಮೊದಲ ಓವರ್ನ 4ನೇ ಎಸೆತದಲ್ಲಿ ನಾಯಕ ಕೇನ್ ವಿಲಿಯಮ್ಸನ್(0) ವಿಕೆಟ್ ಕಳೆದುಕೊಂಡ ಹೈದರಾಬಾದ್ ಕಳಪೆ ಆರಂಭ ಪಡೆಯಿತು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್(11), ವೃದ್ಧಿಮಾನ್ ಸಹಾ(6) ಬೇಗನೇ ಔಟಾದರು. ಮನೀಶ್ ಪಾಂಡೆ(54,51 ಎಸೆತ,3ಬೌಂಡರಿ,1 ಸಿಕ್ಸರ್) ಹಾಗೂ ಶಾಕಿಬ್ ಅಲ್ ಹಸನ್(28,29ಎಸೆತ)4ನೇ ವಿಕೆಟ್ಗೆ 52 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಪಾಂಡೆ ಹಾಗೂ ಯೂಸುಫ್ ಪಠಾಣ್(ಔಟಾಗದೆ 21)5ನೇ ವಿಕೆಟ್ಗೆ 49 ರನ್ ಸೇರಿಸಿದರೂ ತಂಡವನ್ನು ದೊಡ್ಡ ಮೊತ್ತದತ್ತ ಮುನ್ನಡೆಸಲು ವಿಫಲರಾದರು.
ರಾಜ್ಪೂತ್ 4 ಓವರ್ಗಳಲ್ಲಿ 14 ರನ್ ನೀಡಿ 5 ವಿಕೆಟ್ಗಳನ್ನು ಉರುಳಿಸಿ ಗಮನ ಸೆಳೆದರು.
.........