ಮಗನನ್ನು ರಕ್ಷಿಸಲು ಬಾಲಕಿಯ ಕೊಲೆಗೆ ನಿರ್ಧಾರ ಮಾಡಿದ ಬಂಧಿತ ಸಂಜಿರಾಮ್: ತನಿಖಾಧಿಕಾರಿಗಳ ಹೇಳಿಕೆ
ಕಥುವಾ ಅತ್ಯಾಚಾರ, ಕೊಲೆ ಪ್ರಕರಣ

ಜಮ್ಮು, ಎ.27: ತನ್ನ ಪುತ್ರ ಕಥುವಾ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಶಾಮೀಲಾಗಿದ್ದಾನೆಂದು ತಿಳಿದು ಬಂದ ನಂತರ ಆಕೆಯನ್ನು ಕೊಲ್ಲಲು ನಿರ್ಧರಿಸಿದೆವು ಎಂದು ಪ್ರಕರಣದ ಪ್ರಮುಖ ಆರೋಪಿ ಸಂಜಿರಾಮ್ ತನಿಖೆಯ ವೇಳೆ ಬಹಿರಂಗ ಪಡಿಸಿದ್ದಾನೆ ಎನ್ನಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ ಜನವರಿ 10ರಂದು ಬಾಲಕಿಯನ್ನು ಅಪಹರಿಸಲಾಗಿತ್ತಾದರೆ, ಅಪ್ರಾಪ್ತನಾಗಿದ್ದ ರಾಮ್ ನ ಸೋದರಳಿಯ ಅದೇ ದಿನ ಆಕೆಯ ಮೇಲೆ ಮೊದಲು ಅತ್ಯಾಚಾರಗೈದಿದ್ದ. ಆಕೆಯನ್ನು ಜನವರಿ 14ರಂದು ಕೊಲ್ಲಲಾಗಿದ್ದರೆ, ಜನವರಿ 17ರಂದು ಆಕೆಯ ಮೃತದೇಹ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿತ್ತು.
ಸೋದರಳಿಯನ ಜತೆ ರಾಮ್, ಆತನ ಪುತ್ರ ವಿಶಾಲ್ ಹಾಗೂ ಐದು ಮಂದಿ ಇತರರು ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತನಗೆ ಜನವರಿ 13ರಂದು ತನ್ನ ಸೋದರಳಿಯ ತಿಳಿಸಿದಾಗಲೇ ಗೊತ್ತಾಗಿತ್ತೆಂದು ಸಂಜಿ ರಾಮ್ ತನಿಖೆಯ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.
ತನಿಖಾಕಾರರ ಪ್ರಕಾರ ಸಂಜಿರಾಮ್ ಆ ದಿನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದು, ಸೋದರಳಿಯನಿಗೆ ಪ್ರಸಾದ ಕೊಂಡು ಹೋಗಲು ಹೇಳಿದ್ದ. ಆದರೆ ಆತ ವಿಳಂಬಿಸಿದಾಗ ಸಂಜಿ ರಾಮ್ ಆತನಿಗೆ ಹೊಡೆದಿದ್ದ. ತಾನು ಬಾಲಕಿಯ ಅತ್ಯಾಚಾರ ನಡೆಸಿದ್ದು ತಿಳಿದಿದೆ ಎಂದು ತಿಳಿದ ಸೋದರಳಿಯ ನಿಜ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ. ಆಗ ರಾಮ್ ಬಾಲಕಿಯನ್ನು ಕೊಲ್ಲುವುದು ಸರಿಯಾದ ಕ್ರಮ ಹಾಗೂ ಈ ಮೂಲಕ ಆಕೆಯ ಬಾಕರ್ವಾಲ್ ಅಲೆಮಾರಿ ಜನಾಂಗವನ್ನು ಬೆದರಿಸಬಹುದೆಂದು ಹೇಳಿದ್ದಾನೆ ಎನ್ನಲಾಗಿದೆ.
ಜನವರಿ 13 ಹಾಗೂ 14ರ ರಾತ್ರಿ ವಿಶಾಲ್, ಆತನ ಗೆಳೆಯ ಪರ್ವೇಶ್ ಕುಮಾರ್ ಅಲಿಯಾಸ್ ಮನ್ನು ಬಾಲಕಿಯನ್ನು ದೇವಸ್ಥಾನದಿಂದ ಹೊರಗೊಯ್ದಿದ್ದ. ಅಲ್ಲಿ ಅವರ ಜತೆ ಸೇರಿದ ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜುರಿಯಾ ಆಕೆಯನ್ನು ಕೊಲೆಗೈಯ್ಯುವ ಮೊದಲು ಒಮ್ಮೆ ಅತ್ಯಚಾರ ನಡೆಸಲು ಬಯಸಿದ್ದ ಎಂಬುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಜನವರಿ 14ರಂದು ಬಾಲಕಿಯ ಹತ್ಯೆ ನಡೆಸಲಾಗಿತ್ತಾದರೆ ತನ್ನ ಪುತ್ರ ಸಿಕ್ಕಿ ಬೀಳದಂತೆ ಯಾವುದೇ ಸಾಕ್ಷ್ಯವನ್ನು ರಾಮ್ ಉಳಿಸಿರಲಿಲ್ಲ. ಆದರೆ ಅವರೆಣಿಸಿದಂತೆ ಯಾವುದೂ ಆಗಿರಲಿಲ್ಲ. ಆರಂಭದಲ್ಲಿ ಬಾಲಕಿಯ ಮೃತದೇಹವನ್ನು ಹೀರಾನಗರ ಕಾಲುವೆಯಲ್ಲಿ ಎಸೆಯುವ ಉದ್ದೇಶವಿತ್ತಾದರೂ ವಾಹನದ ಏರ್ಪಾಟು ಆಗದೇ ಇದ್ದುದರಂದ ಆಕೆಯ ದೇಹವನ್ನು ಮರುದಿನ ಅರಣ್ಯದಲ್ಲಿ ಎಸೆದಿದ್ದರು ಎಂದು ತಿಳಿದು ಬಂದಿದೆ.







