ಆಲಿಘರ್ ಮುಸ್ಲಿಂ ವಿವಿಯಲ್ಲಿ ಆರೆಸ್ಸೆಸ್ ಶಾಖಾ ನಡೆಸಲು ಅನುಮತಿಸಿ: ಉಪಕುಲಪತಿಗೆ ಪತ್ರ

ಆಗ್ರಾ, ಎ.27: ಅಲ್ಪಸಂಖ್ಯಾತ ವಿದ್ಯಾರ್ಥಿ ಸಮುದಾಯದಲ್ಲಿ ಬಲಪಂಥೀಯ ಸಂಘಟನೆಗಳ ಬಗೆಗಿರುವ ತಪ್ಪು ಅಭಿಪ್ರಾಯಗಳನ್ನು ದೂರ ಸರಿಸುವ ದೃಷ್ಟಿಯಿಂದ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಆರೆಸ್ಸೆಸ್ ಶಾಖಾ (ಶಿಬಿರ) ನಡೆಸಲು ಅನುಮತಿಸಬೇಕೆಂದು ಕೋರಿ ಆರೆಸ್ಸೆಸ್ ಸ್ವಯಂಸೇವಕರು ವಿಶ್ವವಿದ್ಯಾಲಯದ ಉಪಕುಲಪತಿ ತಾರಿಖ್ ಮನ್ಸೂರ್ ಅವರಿಗೆ ಪತ್ರ ಬರೆದಿದ್ದಾರೆ.
"ಆರೆಸ್ಸೆಸ್ ಬಗೆಗಿನ ವಾಸ್ತವಗಳನ್ನು ವಿದ್ಯಾರ್ಥಿಗಳಿಗೆ ಹೇಳುವ ಅಗತ್ಯ ಬಹಳಷ್ಟಿದೆ. ಸಂಘಟನೆಯ ಬಗ್ಗೆ ಹಲವು ವಿದ್ಯಾರ್ಥಿಗಳು ಆಧಾರರಹಿತ ಹೇಳಿಕೆ ನೀಡುತ್ತಿದ್ದಾರಲ್ಲದೆ, ತಪ್ಪು ಮಾಹಿತಿಗಳನ್ನೂ ಹರಡುತ್ತಿದ್ದಾರೆ'' ಎಂದು ಆರೆಸ್ಸೆಸ್ ಕಾರ್ಯಕರ್ತ ಅಮೀರ್ ರಶೀದ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಅಲಿಘರ್ ಮುಸ್ಲಿಂ ವಿವಿಯ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಮಷ್ಕೂರ್ ಅಹ್ಮದ್ ಉಸ್ಮಾನಿ ಅವರನ್ನು ಸಂಪರ್ಕಿಸಿದಾಗ "ಇದೊಂದು ಶೈಕ್ಷಣಿಕ ಸಂಸ್ಥೆ, ರಾಜಕೀಯ ಮಾಡುವ ಸ್ಥಳವಲ್ಲ. ಈ ಬೇಡಿಕೆಯನ್ನು ನಾವು ವಿರೋಧಿಸುತ್ತೇವೆ. ದೇಶವನ್ನು ಒಡೆಯುವುದೇ ಆರೆಸ್ಸೆಸ್ ಸಿದ್ಧಾಂತ. ಅವರಿಗೆ ನಮ್ಮ ಕ್ಯಾಂಪಸ್ ಒಳಗೆ ಅನುಮತಿಸಲಾಗುವುದಿಲ್ಲ'' ಎಂದಿದ್ದಾರೆ.





