ಉನ್ನಾವೋ ಪ್ರಕರಣ: ಬಿಜೆಪಿ ಶಾಸಕನ ಪುರುಷತ್ವ ಪರೀಕ್ಷೆ ನಡೆಸಲು ನಿರ್ಧರಿಸಿದ ಸಿಬಿಐ

ಲಕ್ನೋ, ಎ.27: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ನ ಪುರುಷತ್ವ ಪರೀಕ್ಷೆ ನಡೆಸಲು ಸಿಬಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಪರೀಕ್ಷೆಯನ್ನು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಸಲಾಗುವ ಸಾಧ್ಯತೆಯಿದೆ. ಈ ಹಿಂದೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಹಾಗೂ ರಾಮ್ ಮನೋಹರ್ ಲೋಹಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ನಡೆಸಲು ಯೋಚಿಸಲಾಗಿತ್ತಾದರೂ ಅಲ್ಲಿ ಆ ಪರೀಕ್ಷೆ ನಡೆಸುವ ಸೌಲಭ್ಯಗಳಿಲ್ಲ ಎಂದು ತಿಳಿದು ಬಂದಿದೆ.
ಆರೋಪಿ ನ್ಯಾಯಾಲಯದಲ್ಲಿ ತಾನು 'ನಪುಂಸಕ' ಹಾಗೂ 'ಅತ್ಯಾಚಾರ ನಡೆಸಲು ಅಸಮರ್ಥ' ಎಂದು ವಾದಿಸುವುದನ್ನು ಈ ಪರೀಕ್ಷೆ ತಪ್ಪಿಸುತ್ತದೆ. ಉನ್ನಾವೋ ಜಿಲ್ಲೆಯ ಬಂಗರಮೌ ಕ್ಷೇತ್ರದ ಬಿಜೆಪಿ ಶಾಸಕನಾಗಿರುವ ಸೇಂಗರ್ ರನ್ನು ಎಪ್ರಿಲ್ 13ರಂದು ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ಸಂತ್ರಸ್ತೆಯ ತಂದೆ ಕಸ್ಟಡಿಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸೇಂಗರ್ ನ ಆತನ ಕಿರಿಯ ಸೋದರ ಅತುಲ್ ಸಿಂಗ್ ನನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕನ ಸಹವರ್ತಿಗಳಾದ ವೀರೇಂದ್ರ ಸಿಂಗ್ ಆಲಿಯಾಸ್ ಬಬುವಾ, ವಿನೀತ್, ಶಾಲು, ಸೋನು ಸಿಂಗ್ ಎಂಬವರನ್ನೂ ಬಂಧಿಸಲಾಗಿದೆ. ಸಂತ್ರಸ್ತೆಯನ್ನು ಮಾಖಿ ಗ್ರಾಮದಲ್ಲಿರುವ ಶಾಸಕನ ನಿವಾಸಕ್ಕೆ ಕರೆದುಕೊಂಡು ಹೋದ ಆರೋಪ ಎದುರಿಸುತ್ತಿರುವ ಶಶಿ ಸಿಂಗ್ ಎಂಬ ಮಹಿಳೆಯನ್ನೂ ಸಂತ್ರಸ್ತೆಯ ತಾಯಿಯ ದೂರಿನಂತೆ ಬಂಧಿಸಲಾಗಿದೆ. ಸಂತ್ರಸ್ತೆಯನ್ನು ಅತ್ಯಾಚಾರಗೈಯ್ಯುತ್ತಿದ್ದಾಗ ಹೊರಗೆ ಕಾವಲು ಕಾಯುವ ಕೆಲಸವನ್ನೂ ಶಶಿ ಸಿಂಗ್ ಮಾಡಿದ್ದಳೆಂಬ ಆರೋಪವಿದೆ.







