ಬಸವಣ್ಣನವರಿಗೆ ನಮಿಸುವ ಪ್ರಧಾನಿ ನುಡಿದಂತೆ ನಡೆಯುತ್ತಿಲ್ಲ: ರಾಹುಲ್ ಗಾಂಧಿ
ಗೋಣಿಕೊಪ್ಪದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ

ಮಡಿಕೇರಿ,ಎ.27: ಬಸವಣ್ಣ ಅವರು ನುಡಿದಂತೆ ನಡೆ ಎಂದಿದ್ದರು. ಆದರೆ ಬಸವಣ್ಣನವರಿಗೆ ನಮಿಸುವ ದೇಶದ ಪ್ರಧಾನಿ ನರೇಂದ್ರಮೋದಿ ಅವರು ನುಡಿದಂತೆ ನಡೆದಿಲ್ಲವೆಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗೋಣಿಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ದಸರಾ ಮೈದಾನದಲ್ಲಿ ಮಾತನಾಡಿದ ಅವರು, ಬಸವಣ್ಣನವರು ನುಡಿದಂತೆ ನಡೆ ಎಂದಿದ್ದರು. ಅವರಿಗೆ ನಮಿಸುವ ಮೋದಿ ನುಡಿದಂತೆ ನಡೆದಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಯಾರಿಗೂ ಏನೂ ಸಿಗಲಿಲ್ಲವೆಂದು ಹೇಳಿದರು.
ನೋಟ್ ಬ್ಯಾನ್ ಪ್ರಯೋಗ ಮಾಡುವ ಮೂಲಕ ಜನಸಾಮಾನ್ಯರನ್ನು ಪ್ರಧಾನಿ ಸಂಕಷ್ಟಕ್ಕೆ ಸಿಲುಕಿಸಿದರು. ಅವರ ಸೂಟ್ ಬೂಟ್ ಸ್ನೇಹಿತರು ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಂಡರು. ಬಡವರು ಕಷ್ಟ ಕಾಲಕ್ಕಾಗಿ ಇಟ್ಟಿದ್ದ ಹಣವನ್ನು ಸೂಟ್ ಬೂಟ್ ಸ್ನೇಹಿತರಿಗೆ ನೀಡಿದರು. ನೀರವ್ ಮೋದಿ ಅಂತವರು ಬಡವರ ಹಣ ಗುಳುಂ ಮಾಡಿದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್‍ಗಾಂಧಿ 'ನುಡಿದಂತೆ ನಡೆ ಮೋದೀಜಿ' ಎಂದು ಸಭೆಯ ಗಮನ ಸೆಳೆದರು.
ಎಲ್ಲಿ ಭ್ರಷ್ಟಾಚಾರದ ವಿಚಾರಗಳು ಚರ್ಚೆಯಾಗುತ್ತವೆ ಎಂದು ಲೋಕಸಭೆಯಲ್ಲಿ ಎದ್ದು ನಿಲ್ಲಲು ಕೂಡ ಪ್ರಧಾನಿ ಹೆದರುತ್ತಾರೆ. ಇದೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಿದೆ. ತಮ್ಮ ಸ್ನೇಹಿತರ ಹಗರಣಗಳ ಬಗ್ಗೆ ಚರ್ಚೆಯಾಗುತ್ತದೆ ಎನ್ನುವ ಭಯದಿಂದ ಪ್ರಧಾನಿ ಹೀಗೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಮೋದಿ ಜೀ ಅವರೇ ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಿರಿ. ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ. ಆದರೆ ಯು.ಪಿಯಲ್ಲಿ ಬಿಜೆಪಿ ಶಾಸಕರೇ ಅತ್ಯಾಚಾರ ಮಾಡುತ್ತಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಬಿಜೆಪಿಯವರಿಂದ ಬೇಟಿ ಬಚಾವೋ ಸಾಧ್ಯವಿಲ್ಲವೆಂದು ಟೀಕಿಸಿದರು. ಚಿಲ್ಲರೆ ಅಂಗಡಿಯವರನ್ನೂ ಬಿಡದೆ ಎಲ್ಲರಿಂದಲೂ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ಮೋದಿಯದ್ದು ಬಾಯಿ ಬಡಾಯಿಯಾಯಿತೇ ಹೊರತು ಸಾಧನೆ ಶೂನ್ಯ ಎಂದು ವ್ಯಂಗ್ಯವಾಡಿದರು.
ನಮ್ಮ ಸರ್ಕಾರದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ನಿಮಗೆ ತಾಕತ್ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದೆ. ಆದರೆ ಅವರಿಗ್ಯಾರಿಗೂ ಬರಲು ಧಮ್ ಇಲ್ಲ ಸಿಎಂ ವಾಗ್ಧಾಳಿ ನಡೆಸಿದರು.
ಈ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸ್ಪೀಕರ್ ಆಗಿದ್ದಾಗ ಯಡಿಯೂರಪ್ಪ ಅವರ ಸರ್ಕಾರವನ್ನು ಉಳಿಸುವ ಕಾರ್ಯ ಮಾಡಿದರೇ ಹೊರತು ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲವೆಂದು ಸಿದ್ದರಾಮಯ್ಯ ಆರೋಪಿಸಿದರು.
ಕೊಡಗು ಅತಿ ಸುಂದರ
ಭಾರತದಲ್ಲಿ ಇಂತಹ ಸುಂದರ ಸ್ಥಳವನ್ನು ನಾನೆಲ್ಲೂ ನೋಡಿಲ್ಲ. ಇದು ಅತ್ಯಂತ ಸುಂದರವಾದ ಪ್ರದೇಶವೆಂದು ರಾಹುಲ್ ಗಾಂಧಿ ಕೊಡಗನ್ನು ಹಾಡಿ ಹೊಗಳಿದರು. ಕೊಡಗಿನ ಜನ ವಿಶ್ವಾಸಕ್ಕೆ ಮತ್ತು ಸ್ನೇಹಕ್ಕೆ ಅರ್ಹರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದರು.
ವೇದಿಕೆ ಏರದ ಅಭ್ಯರ್ಥಿಗಳು
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರುಗಳ ಪರ ಪ್ರಚಾರ ನಡೆಸುವುದಕ್ಕಾಗಿ ರಾಹುಲ್ ಗಾಂಧಿ ಆಗಮಿಸಿದ್ದರು. ಆದರೆ ಅವರಿಬ್ಬರೂ ಸಭಿಕರ ಸಾಲಿನಲ್ಲೇ ಕುಳಿತು ನಾಯಕರ ಭಾಷಣ ಆಲಿಸಿದ್ದು ವಿಶೇಷ.
ಮೋದಿಗೆ ಜೈ !
ಗೋಣಿಕೊಪ್ಪಕ್ಕೆ ಹೆಲಿಕಾಫ್ಟರ್ ನಲ್ಲಿ ಆಗಮಿಸಿದ ರಾಹುಲ್ ಗಾಂಧಿ ಕಾವೇರಿ ಕಾಲೇಜು ಮೈದಾನದಲ್ಲಿ ಇಳಿದು ದಸರಾ ಮೈದಾನಕ್ಕೆ ಆಗಮಿಸುವ ಸಂದರ್ಭ ಕಾಲೇಜು ರಸ್ತೆಯಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.
ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಮಾಜಿ ಸಚಿವರಾದ ಸುಮಾವಸಂತ್, ರೇಷ್ಮೆ ನಿಗಮದ ಅಧ್ಯಕ್ಷರಾದ ಟಿ.ಪಿ.ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವು ಮಾದಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೆ.ಎ.ಯಾಕೂಬ್ ಮತ್ತಿತರ ಪ್ರಮುಖರು ಹಾಜರಿದ್ದರು.







