ಬಿಯಾಂಡ್ ದಿ ಕ್ಲೌಡ್ಸ್ ನಲ್ಲಿ ಮಿಂಚಿದ ಕನ್ನಡದ ಧ್ವನಿ!

ಇರಾನ್‌ನ ಖ್ಯಾತ ನಿರ್ದೇಶಕ ಮಜೀದ್ ಮಜೀದಿ ಅವರ ಚೊಚ್ಚಲ ಹಿಂದಿ ಚಿತ್ರ ‘ಬಿಯಾಂಡ್ ದಿ ಕ್ಲೌಡ್ಸ್’ ನಲ್ಲಿ ಕನ್ನಡದ ಪ್ರತಿಭೆಯೊಂದು ಅರಳಿರುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಹೌದು. ಇಶಾನ್ ಕಟ್ಟರ್ ಹಾಗೂ ಮಾಲವಿಕಾ ಮೋಹನನ್ ಜೊತೆಯಾಗಿ ನಟಿಸಿರುವ ಈ ಚಿತ್ರದಲ್ಲಿ ಓರ್ವ ಬಾಲನಟಿಗೂ ಮುಖ್ಯವಾದ ಪಾತ್ರವಿತ್ತು. ಆ ಬಾಲನಟಿ ಮತ್ತ್ಯಾ ರೂ ಆಲ್ಲ, ಕನ್ನಡದ ಜನಪ್ರಿಯ ನಟ ರಾಜೇಶ್ ನಟರಂಗ ಅವರ ಮುದ್ದಿನ ಮಗಳು ಧ್ವನಿ!.
ಈಗ ಏಳನೆ ತರಗತಿಯಲ್ಲಿ ಓದುತ್ತಿರುವ ಧ್ವನಿಯ ಬಾಲಿವುಡ್ ಪ್ರವೇಶ ತೀರಾ ಆಕಸ್ಮಿಕ ವಾಗಿತ್ತು. ಕನ್ನಡದ ಖ್ಯಾತ ಟಿವಿ ಧಾರಾವಾಹಿ ನಟಿ ಸುಂದರಶ್ರೀ ಅವರು ತನ್ನ ಬಳಿ ಮಜೀದಿ ಹಿಂದಿಯಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದರು ಹಾಗೂ ಆ ಚಿತ್ರದಲ್ಲಿ ಧ್ವನಿಗೆ ಒಂದು ಉತ್ತಮ ಪಾತ್ರವಿದ್ದು, ಆಕೆಗೆ ನಟಿಸಲು ಅನುಮತಿ ನೀಡುವಂತೆ ತನ್ನನ್ನು ಕೋರಿದ್ದರು ಎಂದು ರಾಜೇಶ್ ತಿಳಿಸಿದ್ದಾರೆ. ಅಂದಹಾಗೆ ಧ್ವನಿ ಈಗಾಗಲೇ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ನಟಿಸಲು ಮನಸ್ಸಿದೆಯೇ ಎಂದು ತಾನು ಧ್ವನಿಗೆ ಕೇಳಿದಾಗ, ಆಕೆ ಸಂತಸದಿಂದಲೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಳು. ಚಿತ್ರದಲ್ಲಿನ ಬಾಲಕಿಯ ಪಾತ್ರಕ್ಕೆ ಧ್ವನಿ ಸೂಕ್ತವಾಗಿ ಹೊಂದಿಕೊಳ್ಳುವುದರಿಂದ ನಿರ್ದೇಶಕ ಮಜೀದಿ ಆಕೆಯನ್ನು ಆಯ್ಕೆ ಮಾಡಿದ್ದಾರೆ. ಚಿತ್ರೀಕರಣದುದ್ದಕ್ಕೂ ಧ್ವನಿ ಜೊತೆ ತನ್ನ ಪತ್ನಿ ಜೊತೆಗಿದ್ದುದಾಗಿ ರಾಜೇಶ್ ನಟರಂಗ ಹೇಳಿದ್ದಾರೆ. ಓರ್ವ ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಭಾವಂತ ನಿರ್ದೇಶಕನ ಮೂಲಕ ತನ್ನ ಪುತ್ರಿ ಚಿತ್ರ್ರರಂಗ ಪ್ರವೇಶಿಸಿರುವುದು ತನಗೆ ಸಂತಸ ತಂದಿದೆಯೆಂದವರು ಹೇಳಿದ್ದಾರೆ.
ಟಿವಿ ಸಿರಿಯಲ್‌ಗಳಲ್ಲಿ ನಟಿಸಿದ್ದರೂ, ಸಿನೆಮಾದಲ್ಲಿನ ಅಭಿನಯವು ತನಗೆ ಹೊಸ ಅನುಭವವನ್ನು ನೀಡಿದೆಯೆಂದು ಧ್ವನಿ ಹೇಳಿದ್ದಾರೆ. ಅತ್ಯಂತ ತ್ವರಿತವಾಗಿ ಹಾಗೂ ಅಷ್ಟೇ ಅಚ್ಚುಕಟ್ಟಾಗಿ ಚಿತ್ರೀಕರಣ ನಡೆದಿತ್ತು. ಇಡೀ ಸೆಟ್‌ನಲ್ಲಿನ ವಾತಾವರಣ ಅತ್ಯಂತ ಸೌಹಾರ್ದಯುತವಾಗಿತ್ತು ಎನ್ನುವ ಧ್ವನಿ, ಚಿತ್ರ ನೋಡಿದ ಬಳಿಕ ತನಗೆ ಅತ್ಯಂತ ಸಂತಸವವಾಗಿದೆಯೆಂದು ಹೇಳುತ್ತಾರೆ.
ಧ್ವನಿ ತನ್ನ ಸ್ವಂತ ಪ್ರತಿಭೆಯಿಂದ ಚಿತ್ರರಂಗ ಪ್ರವೇಶಿಸಿರುವುದು ತನಗೆ ಹರ್ಷ ತಂದಿದೆಯೆಂದು ರಾಜೇಶ್ ಹೇಳುತ್ತಾರೆ. ಭವಿಷ್ಯದಲ್ಲಿ ಚಿತ್ರರಂಗ ಪ್ರವೇಶಿಸುವುದು ಆಕೆಯ ಆಯ್ಕೆಗೆ ಬಿಟ್ಟ ವಿಚಾರವೆಂದು ರಾಜೇಶ್ ಹೇಳುತ್ತಾರೆ. ಬಿಯಾಂಡ್ ಕ್ಲೌಡ್ ್ಸನಲ್ಲಿ ನೈಜ ಅಭಿನಯದ ಮೂಲಕ ಧ್ವನಿ, ಈಗ ಇಡೀ ಭಾರತೀಯ ಚಿತ್ರರಂಗದ ಗಮನಸೆಳೆದಿರುವುದಂತೂ ನಿಜ.







