ವೈಜ್ಞಾನಿಕ ತಳಹದಿಯೊಂದಿಗೆ ತಂತ್ರಜ್ಞಾನ ಬೆಳೆಯಲಿ: ಡಾ.ಭೈರಪ್ಪ

ಶಿರ್ವ, ಎ.27: ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪ್ರತ್ಯೇಕ ಅಧ್ಯಯನ ಕ್ಷೇತ್ರಗಳಲ್ಲ. ಇಂದು ಪ್ರಬಲವಾದ ವೈಜ್ಞಾನಿಕ ತಳಹದಿಯೊಂದಿಗೆ ತಂತ್ರಜ್ಞಾನ ಬೆಳೆಯಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ಭೈರಪ್ಪ ಹೇಳಿದ್ದಾರೆ.
ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವತಿ ಯಿಂದ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಲಾದ ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯದ ಕುರಿತ ‘ಎನ್‌ಸಿಇಟಿಎಸ್‌ಇ-2018’ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಂತ್ರಜ್ಞಾನದ ಸತ್ವಯುತ ಬೆಳವಣಿಗೆಗೆ ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರಗಳ ಆಳವಾದ ಅಧ್ಯಯನ ಪೂರಕವಾಗುತ್ತದೆ. ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ನಡುವಿನ ಸಹಯೋಗ ಜ್ಞಾನಪ್ರಪಂಚಕ್ಕೆ ಮಹತ್ತರ ಕೊಡುಗೆಗಳನ್ನು ನೀಡುತ್ತದೆ ಎಂದರು.
ಉಡುಪಿಯ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಡಾ.ಬಾಲಚಂದ್ರ ಆಚಾರ್ ಉಪಸ್ಥಿತರಿದ್ದರು.
ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರೋಶನ್ ಕೋಟ್ಯಾನ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಮ್ಮೇಳನದ ಸಂಯೋಜಕ ಪ್ರೊ.ಡಾ. ಸುದರ್ಶನ್ ರಾವ್ ವಂದಿಸಿದರು.
ಯಾಂತ್ರಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಂತ್ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡಾ.ಕೆ.ಭೈರಪ್ಪ, ನಿಟ್ಟೆಯ ಡಾ.ಐ.ಆರ್.ಮಿಥಂತಾಯ, ಮಣಿಪಾಲ ಎಂಐಟಿಯ ಡಾ.ಎಸ್.ಎಸ್.ಶರ್ಮ, ಮಂಡಿ ಐಐಟಿಯ ಡಾ.ದಿಲೀಪ್, ಮದ್ರಾಸ್ ಐಐಟಿಯ ಪ್ರೊ.ಡಾ.ದೇವೆಂದ್ರ ಜಾಲಿಹಾಲ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
12 ಪ್ರತ್ಯೇಕ ವಿಭಾಗಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ದೇಶದ ವಿವಿಧೆಡೆಗಳಿಂದ ಬಂದ ಸಂಶೋಧಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.







