ರೋಹಿಣಿ ಸಿಂಧೂರಿ ವರ್ಗಾವಣೆ ಅರ್ಜಿ ವಜಾಗೊಳಿಸಿದ್ದ ಸಿಎಟಿ ತೀರ್ಪಿಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಎ.27: ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನ ವರ್ಗಾಯಿಸಿದ್ದ ಸರಕಾರದ ಆದೇಶ ಪ್ರಶ್ನಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕೇಂದ್ರ ಆಡಳಿತ ನ್ಯಾಯಮಂಡಳಿ(ಸಿಎಟಿ) ತೀರ್ಪಿಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಸರಕಾರದ ವರ್ಗಾವಣೆ ಆದೇಶ ಮತ್ತು ಆ ಆದೇಶ ಪ್ರಶ್ನಿಸಿ ತಾವು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಸಿಎಟಿ ತೀರ್ಪು ರದ್ದುಪಡಿಸುವಂತೆ ಕೋರಿ ರೋಹಿಣಿ ಸಿಂಧೂರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ವಿಭಾಗೀಯ ಪೀಠ, ಈ ಮಧ್ಯಂತರ ಆದೇಶ ಮಾಡಿದೆ. ಈ ಮಧ್ಯಂತರ ಆದೇಶವು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ. ಹಾಗೂ ಸರಕಾರದ ವರ್ಗಾವಣೆ ಆದೇಶದಂತೆ ತರಬೇತಿ ಹಾಗೂ ಉದ್ಯೋಗ ನಿರ್ದೇಶನಾಲಯದ ಆಯುಕ್ತರ ಹುದ್ದೆಯ ಅಧಿಕಾರ ಸ್ವೀಕರಿಸುವಂತೆ ರೋಹಿಣಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಈ ಮಧ್ಯೆ ಐಎಎಸ್ ಅಧಿಕಾರಿ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅನುಸರಿಸಲಾಗುತ್ತಿರುವ ನಿಯಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ವಿಚಾರಣೆ ವೇಳೆ ಐಎಎಸ್ ಅಧಿಕಾರಿಗಳ ವರ್ಗಾವಣೆಯನ್ನು ಐಎಎಸ್ ಸೇವೆಗಳ ಮಂಡಳಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಕರ್ನಾಟಕದಲ್ಲಿ ಐಎಎಸ್ ಸೇವೆಗಳ ಮಂಡಳಿಯನ್ನು ರಚನೆ ಮಾಡಿಲ್ಲ. ರಾಜ್ಯ ಸರಕಾರವೇ ವರ್ಗಾವಣೆ ಆದೇಶಗಳನ್ನು ಹೊರಡಿಸಿದೆ ಎಂದು ರೋಹಿಣಿ ಸಿಂಧೂರಿ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು.
ಸರಕಾರಿ ವಕೀಲರು ವಾದ ಮಂಡಿಸಿ, ಐಎಎಸ್ ಆಡಳಿತ ಸೇವೆಗಳ ಅಧಿನಿಯಮಗಳು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಐಎಎಸ್ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಐಎಎಸ್ ಅಧಿಕಾರಿ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅನುಸರಿಸಲಾಗುತ್ತಿರುವ ನಿಯಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತು.







