ಜನಸಾಮಾನ್ಯರ 10 ಲಕ್ಷ ಕೋಟಿ ರೂ.ಕೊಳ್ಳೆ ಹೊಡೆದ ಕೇಂದ್ರ ಸರಕಾರ: ಮಾಜಿ ಸಚಿವ ದೀಪಾ ದಾಸ್‌ಮುನ್ಷಿ
ಬೆಂಗಳೂರು, ಎ.24: ಜಿಡಿಪಿ(ಅನಿಲ, ಡಿಸೇಲ್, ಪೆಟ್ರೋಲ್) ಮೇಲೆ ತೆರಿಗೆ ವಿಧಿಸಿರುವ ಪ್ರಧಾನಿ ನರೇಂದ್ರಮೋದಿ ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಜನಸಾಮಾನ್ಯರ 10 ಲಕ್ಷ ಕೋಟಿ ರೂ.ಗಳನ್ನು ಕೊಳ್ಳೆ ಹೊಡೆದಿದೆ ಎಂದು ಕೇಂದ್ರದ ಮಾಜಿ ಸಚಿವ ದೀಪಾ ದಾಸ್‌ಮುನ್ಷಿ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರಮೋದಿ ಸರಕಾರದ ದುರಾಸೆಯಿಂದಾಗಿ ದೇಶದ ಪ್ರತಿಯೊಬ್ಬರ ಕಿಸೆ ಬರಿದಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಗಗನಕ್ಕೇರುತ್ತಲೇ ಇವೆ. ಇದರ ದುಷ್ಪರಿಣಾಮವಾಗಿ ದೇಶಾದ್ಯಂತ ಶ್ರೀಸಾಮಾನ್ಯರು, ರೈತರು ಮತ್ತು ಮಧ್ಯಮ ವರ್ಗದವರು ಸಂಕಷ್ಟಪಡುತ್ತಿದ್ದು, ಇವರೆಲ್ಲರ ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಡಿಸೇಲ್ ಬೆಲೆ ಪ್ರತಿ ಲೀಟರ್‌ಗೆ 67.08 ರೂ.ನಷ್ಟಾಗಿದೆ. ಇದರಿಂದಾಗಿ, ರೈತರ ಜೀವನಾಡಿಯೆ ಕತ್ತರಿಸಿದಂತಾಗಿದ್ದು, ಇದು ಆಹಾರ ಧಾನ್ಯಗಳ ತೀವ್ರ ಕೊರತೆಗೆ ದಾರಿ ಮಾಡಿಕೊಟ್ಟಿದೆ. ಈ ಸಮಸ್ಯೆಯನ್ನು ನೀಗಿಸಿ, ತೈಲ ಬೆಲೆಗಳಿಗೆ ಕಡಿವಾಣ ಹಾಕಬೇಕಾಗಿದ್ದ ಮೋದಿ ಸರಕಾರ, ಇದಕ್ಕೆ ತದ್ವಿರುದ್ಧವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಪ್ರತಿ ದಿನವೂ ಪರಿಷ್ಕರಿಸುವ ಪ್ರವೃತ್ತಿಯನ್ನು ಆರಂಭಿಸಿತು. ಇದರಿಂದಾಗಿ, ಇಂದು, ಪೆಟ್ರೋಲ್ ಬೆಲೆಯು ಪ್ರತಿ ಲೀಟರಿಗೆ 75.86 ರೂ.ತಲುಪಿದೆ ಎಂದು ಅವರು ದೂರಿದರು.
ತಾನು ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ಬಣ್ಣಬಣ್ಣದ ಮಾತುಗಳನ್ನಾಡುತ್ತ, ಜನರಿಗೆ ಅಂಗೈಯಲ್ಲೆ ಆಕಾಶ ತೋರಿಸುತ್ತಿತ್ತು. ಇದಕ್ಕೆ ಮರುಳಾಗಿ ಜನರು, ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆದರೆ, ಬಿಜೆಪಿ ತಾನು ಕೊಟ್ಟಿದ್ದ ಯಾವ ಭರವಸೆಯನ್ನೂ ಈಡೇರಿಸದೆ ಜನರ ಮೂಗಿಗೆ ಕೇವಲ ತುಪ್ಪ ಸವರುವ ಕೆಲಸವನ್ನಷ್ಟೇ ಮಾಡುತ್ತಿದೆ ಎನ್ನುವುದು ಈಗ ಪ್ರತಿಯೊಬ್ಬರಿಗೂ ಮನದಟ್ಟಾಗಿದೆ ಎಂದು ದೀಪಾ ದಾಸ್‌ಮುನ್ಷಿ ತಿಳಿಸಿದರು.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್‌ಗಡ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದೇಶದ ಉಳಿದ ರಾಜ್ಯಗಳಿಗಿಂತ ದುಬಾರಿಯಾಗಿದೆ. ಇದರ ಜೊತೆಗೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನರ ಮೇಲೆ ಮತ್ತಷ್ಟು ತೆರಿಗೆಯ ಭಾರವನ್ನು ಹೇರಲಾಗುತ್ತಿದೆ. ಹೀಗಾಗಿ, ಆ ರಾಜ್ಯಗಳ ಜನರ ಬದುಕು ಇಂದು ದಯನೀಯವಾಗಿದೆ ಎಂದು ಅವರು ಹೇಳಿದರು.
ಆದರೆ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಜನಸ್ನೇಹಿ ಕಾಂಗ್ರೆಸ್ ಸರಕಾರವು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯ ಹೊರೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿದೆ. ಆದರೆ, ಕರ್ನಾಟಕದ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲ ಬಿಜೆಪಿ ಲೂಟಿ ಮಾಡುತ್ತಿದೆ ಎಂದು ದೀಪಾ ದಾಸ್‌ಮುನ್ಷಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರವು ತನ್ನ ಕಳೆದ 5 ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಲೀಟರಿಗೆ 03.11 ರೂ.ಗಳಷ್ಟು ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನು ಲೀಟರಿಗೆ 1.03 ರೂ.ಗಳಷ್ಟು ಇಳಿಸಿದೆ. ಆದರೆ, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆಯನ್ನು 8.78 ರೂ.ಗಳಷ್ಟು ಮತ್ತು ಡಿಸೇಲ್ ಮೇಲಿನ ತನ್ನ ತೆರಿಗೆಯನ್ನು ಲೀಟರ್‌ಗೆ 10.37ರೂ.ಗಳಷ್ಟು ಏರಿಸಿದೆ ಎಂದು ಅವರು ದೂರಿದರು.
ಕೇಂದ್ರದ ಮಾಜಿ ಸಚಿವ ರಾಜೀವ್ ಶುಕ್ಲಾ ಮಾತನಾಡಿ, ನರೇಂದ್ರಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಶೇ.30ಕ್ಕಿಂತ ಹೆಚ್ಚು ಇಳಿಕೆಯಾಯಿತು. ತೈಲೋತ್ಪನ್ನಗಳ ಬೆಲೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸದೆ, ಹಲವು ಬಗೆಯ ಕೇಂದ್ರ ತೆರಿಗೆಗಳನ್ನು ಹೇರುವ ಮೂಲಕ 9,95,850 ಕೋಟಿ ರೂ.ಗಳನ್ನು ತನ್ನ ಜೇಬಿಗಿಳಿಸಿಕೊಂಡಿತು ಎಂದು ಆರೋಪಿಸಿದರು.
2014ರ ಮೇ ತಿಂಗಳಿನಿಂದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಶೇ.211.7ರಷ್ಟು, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಶೇ.443.06ರಷ್ಟು ಏರಿಕೆ ಮಾಡಲಾಗಿದೆ. 12 ಬಾರಿ ಕೇಂದ್ರ ಅಬಕಾರಿ ಸುಂಕವನ್ನು ಏರಿಸಲಾಗಿದೆ. ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತಲೂ ನಮ್ಮ ದೇಶದಲ್ಲಿ ಪೆಟ್ರೋಲ್, ಡಿಸೇಲ್ ದುಬಾರಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜನವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿಯನ್ನು ರಾಜ್ಯದ ಜನರು ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸಲಿದ್ದಾರೆ. ಪ್ರಧಾನಿ ನರೇಂದ್ರಮೋದಿ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ಇಲ್ಲಿಗೆ ಬಂದಿಳಿಯುತ್ತಿದ್ದಂತೆ ರಾಜ್ಯದ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದು ರಾಜೀವ್ ಶುಕ್ಲಾ ಹೇಳಿದರು.







