ಹನೂರು: ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಮತಯಾಚನೆ
ಹನೂರು,ಎ.27: ಕಳೆದ 10 ವರ್ಷದ ಅಧಿಕಾರವಧಿಯಲ್ಲಿ ಶಾಸಕ ಆರ್.ನರೇಂದ್ರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದು, ಈ ಬಗ್ಗೆ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ. ಈ ದಿಸೆಯಲ್ಲಿ ಈ ಬಾರಿ ಜನತೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಪ್ರೀತನ್ ನಾಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಮಾಲಾಪುರ, ಚಿಕ್ಕಮಾಲಾಪುರ, ಲೊಕ್ಕನಹಳ್ಳಿ, ಹುತ್ತೂರು, ಪಿ.ಜಿ ಪಾಳ್ಯ, ಒಡೆಯರಪಾಳ್ಯ ಹಾಗೂ ಇನ್ನಿತರ ಗ್ರಾಮಗಳಲ್ಲಿ ಶುಕ್ರವಾರ ಮನೆಮನೆಗೆ ತೆರಳಿ ಮತಯಾಚಿಸಿದರು. ನಂತರ ಮಾತನಾಡಿ, ನಮ್ಮ ತಂದೆ ದಿ.ಹೆಚ್ ನಾಗಪ್ಪ ಅವರು ಜನಪರ ಕಾಳಜಿಯುಳ್ಳವರು. ಇವರು ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಆದರೆ ಕಳೆದ 10 ವರ್ಷದ ಅವಧಿಯಲ್ಲಿ ಅಧಿಕಾರವನ್ನು ಪಡೆದ ಶಾಸಕ ಆರ್. ನರೇಂದ್ರ ಅವರು ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಅಲ್ಲದೇ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ತಲೆದೂರುತ್ತಿದೆ. ಇದರಿಂದ ಕುಡಿವ ನೀರಿಗಾಗಿ ಜನರು ಪರತಪಿಸುತ್ತಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಸಮರ್ಪಕ ರಸ್ತೆ ಹಾಗೂ ಅಗತ್ಯ ಮೂಲ ಸೌಕರ್ಯದ ಕೊರತೆ ಇದೆ. ಕೆಲವು ಗ್ರಾಮಗಳಲ್ಲಿ ಸಮರ್ಪಕ ಉದ್ಯೋಗ ಸಿಗದೇ ಜನರು ಗುಳೆ ಹೋಗಿದ್ದಾರೆ. ಇದರಿಂದ ಬೇಸತ್ತ ಕ್ಷೇತ್ರದ ಜನತೆ ಶಾಸಕರ ನಿರ್ಲಕ್ಷ್ಯತೆಗೆ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಆಗಾಗಿ ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದ ಅವರು, ಈ ಬಾರಿ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಗಲ ಪ್ರಕಾಶ್, ಕಣ್ಣೂರು ಬಸವರಾಜಪ್ಪ, ಮುತ್ತುಸ್ವಾಮಿ, ಕಾಮಗೆರೆ ರವಿಚಂದ್ರ, ರಾಜು, ಚಿನ್ನಸ್ವಾಮಿ, ಶನಿಯಪ್ಪ, ಮಣಿ, ಕೃಷ್ಣ ಹಾಗೂ ಇನ್ನಿತರರಿದ್ದರು.







