ಗಂಟೆಗೆ 100 ಮೈಲಿ ವೇಗದ ಬೌಲಿಂಗ್: ಶುಐಬ್ ಅಖ್ತರ್ ದಾಖಲೆಗೆ 16 ವರ್ಷ

ಹೊಸದಿಲ್ಲಿ, ಎ.27: ಕ್ರಿಕೆಟ್ ಪಂದ್ಯವೊಂದರಲ್ಲಿ ವೇಗದ ಬೌಲರ್ ಗಂಟೆಗೆ 100 ಮೈಲು ವೇಗದಲ್ಲಿ ಬೌಲಿಂಗ್ ನಡೆಸಬಹುದು ಎಂದು ಜಗತ್ತಿಗೆ ಮೊತ್ತ ಮೊದಲ ಬಾರಿಗೆ ತೋರಿಸಿಕೊಟ್ಟವರು ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಪಾಕಿಸ್ತಾನದ ವೇಗಿ ಶುಐಬ್ ಅಖ್ತರ್. ಇಂದಿಗೆ ಸರಿಯಾಗಿ 16 ವರ್ಷದ ಹಿಂದೆ, ಅಂದರೆ 2002ರ ಎಪ್ರಿಲ್ 27ರಂದು ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್ ಎದುರು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಖ್ತರ್ ಎಸೆದ ಚೆಂಡು 104:04 ಮೈಲು ವೇಗ(161 ಕಿ.ಮೀ ) ದಾಖಲಿಸಿತ್ತು.
ಕ್ಷಿಪಣಿ ವೇಗದಲ್ಲಿ ಬಂದೆರಗಿದ ಈ ಎಸೆತವನ್ನು ಎದುರಿಸಿದವರು ನ್ಯೂಝಿಲ್ಯಾಂಡ್‌ನ ಆಟಗಾರ ಕ್ರೆಗ್ ಮೆಕ್‌ಮಿಲನ್. ಇದಕ್ಕೂ ಮೊದಲು, 1975ರಲ್ಲಿ ಆಸ್ಟ್ರೇಲಿಯಾದ ಭಯಾನಕ ವೇಗಿ ಜೆಫ್ ಥಾಮ್ಸನ್ ಗಂಟೆಗೆ 99.8 ಮೈಲು ವೇಗದಲ್ಲಿ ಬೌಲಿಂಗ್ ನಡೆಸಿದ್ದು ದಾಖಲೆಯಾಗಿತ್ತು. ಅಖ್ತರ್ ಅವರ ಇನ್ನೊಂದು ವಿಶೇಷವೆಂದರೆ, ತಾವು ಸ್ಥಾಪಿಸಿದ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದು. ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್‌ನಲ್ಲಿ 2003ರಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಖ್ತರ್ ಗಂಟೆಗೆ 100.23 ಮೈಲು ವೇಗ(161.23 ಕಿ.ಮೀ) ದಲ್ಲಿ ಬೌಲಿಂಗ್ ನಡೆಸಿದ್ದರು. ಅಖ್ತರ್ ದಾಖಲೆಯನ್ನು ಮುರಿಯಲು ಹಲವು ವೇಗಿಗಳು ಪ್ರಯತ್ನ ನಡೆಸಿದ್ದರೂ ವಿಫಲರಾಗಿದ್ದಾರೆ.
ಅಖ್ತರ್ ಹೊರತುಪಡಿಸಿದರೆ, ಆಸ್ಟ್ರೇಲಿಯಾದ ಬೌಲರ್‌ಗಳಾದ ಬ್ರೆಟ್ ಲೀ ಮತ್ತು ಶಾನ್ ಟೈಟ್ ಗಂಟೆಗೆ 100 ಮೈಲು ವೇಗದಲ್ಲಿ ಬೌಲಿಂಗ್ ನಡೆಸಿದ್ದಾರೆ.







