ಪಿಯು ವಾಣಿಜ್ಯ ವಿಭಾಗಕ್ಕೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕ

ಬೆಂಗಳೂರು, ಎ.27: ಪ್ರಸಕ್ತ ಸಾಲಿನಿಂದ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿಯ(ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳನ್ನು ಅಳವಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಇನ್‌ಸಿಇಆರ್‌ಟಿ ಪಠ್ಯಗಳಲ್ಲಿ ಕೇಂದ್ರದ ಪಠ್ಯಕ್ರಮ ಅಳವಡಿಸಲಾಗಿದ್ದು, ರಾಷ್ಟ್ರೀಯ ಮಟ್ಟದ ಯಾವುದೆ ಅರ್ಹತಾ ಪರೀಕ್ಷೆಗಳನ್ನು ಎದುರಿಸಲು ಈ ಪಠ್ಯಪುಸ್ತಕಗಳು ಸಹಕಾರಿಯಾಗಿವೆ. ಈಗಾಗಲೆ ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ವಿಜ್ಞಾನದ ವಿಭಾಗಕ್ಕೆ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳನ್ನೆ ಅಳವಡಿಸಲಾಗಿದೆ.
ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಇಟಿ, ಐಐಟಿ, ಇಂಟಿಗ್ರೇಟೆಡ್ ಕೋರ್ಸ್ ಹಾಗೂ ಬ್ರಿಡ್ಜ್ ಕೋರ್ಸ್‌ಗಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಿಗದಿತ ಶುಲ್ಕಕ್ಕಿಂತ ಹೆಚ್ಚದಿನ ಶುಲ್ಕ ಪಡೆಯುವಂತಹ ಕಾಲೇಜುಗಳನ್ನು ರದ್ದು ಪಡಿಸಲು ಇಲಾಖೆ ನಿರ್ಧರಿಸಿದೆ.
ಸರಕಾರಿ, ಖಾಸಗಿ ಹಾಗೂ ಅನುದಾನಿತ ಕಾಲೇಜುಗಳ ಉಪನ್ಯಾಸಕರು ಮನೆಪಾಠ ಮಾಡುವುದು ನಿಷಿದ್ಧ. ಒಂದು ವೇಳೆ ಪಾಠ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದರೆ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ(4)ರ ಅನ್ವಯ ಶಿಸ್ತುಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರ ನೀಡಿದೆ.







