ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಂಬೇಡ್ಕರ್ ಕೊಡುಗೆ ಅಪಾರ: ಯದುವೀರ್
ಮೈಸೂರು,ಎ.27: ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಯ ವತಿಯಿಂದ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾಲೇಜಿನ ಎಂ.ವೆಂಕಟಕೃಷ್ಣಯ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಆಶಯಗಳಂತೆ ಮೈಸೂರು ಸಂಸ್ಥಾನವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಲವು ಕಮಿಟಿಗಳ ಮುಖಾಂತರ ದಲಿತರಿಗೆ ಶಿಕ್ಷಣ, ಉದ್ಯೋಗ, ಭಾತೃತ್ವ, ಸಮಾನತೆ ದೊರಕಿಸಿಕೊಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಶ್ರೇಷಾದ್ರಿ ಅಯ್ಯರ್, ಡಾ.ಆರ್.ಸಿ.ರೆಡ್ಡಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ, ಬ್ರಿಟಿಷರು ದೇಶವನ್ನು ಬಿಟ್ಟು ಹೋದ ನಂತರ ಆಡಳಿತಾತ್ಮಕವಾಗಿ ಬ್ರಾಹ್ಮಣರು, ಕ್ಷತ್ರಿಯರು ಮಾತ್ರ ಕೆಲಸ ಮಾಡುತ್ತಿದ್ದರು. ಆದರೆ ಆಡಳಿತಾತ್ಮಕವಾಗಿ ಎಲ್ಲ ವರ್ಗದವರು ಪಾಲ್ಗೊಳ್ಳಬೇಕು ಎಂದು ಮೈಸೂರು ಸಂಸ್ಥಾನ ಶ್ರಮಿಸಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ವಿಚಾರವಾದಿ ಡಾ.ಶಿವಕುಮಾರ್ ಮಾತನಾಡಿ, ಖಾಸಗೀಕರಣ, ಉದಾರೀಕರಣ, ಜಾಗತಿಕರಣದ ಪ್ರಭಾವದಿಂದಾಗಿ ಭಾರತ ಮತ್ತೆ ಹಿಂದಕ್ಕೆ ಸಾಗುತ್ತಿದೆ. ಪ್ರಜಾಪ್ರಭುತ್ವದ ಆಶಯಗಳು ಇದರಿಂದ ನಾಶವಾಗುತ್ತಿದೆ. ಸಂವಿಧಾನ ರಚನೆಗೂ ಮುನ್ನವೇ ನಾಲ್ವಡಿ ಕೃಷ್ಣರಾಜ ಒಡೆಯರ್, ಛತ್ರಪತಿ ಶಾಹು ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಸಂವಿಧಾನದ ಆಶಯಗಳನ್ನು ಜಾರಿಗೆ ತಂದಿದ್ದರು. ಆ ಮೂಲಕ ಜನಪರ ಒಡೆಯರುಗಳು ಎಂದೆನ್ನಿಸಿಕೊಂಡಿದ್ದರು ಎಂದು ಹೇಳಿದರು.
ನಮ್ಮ ಜನರಲ್ಲಿ ಮೀಸಲಾತಿ ಬಗ್ಗೆ ತಪ್ಪು ಕಲ್ಪನೆ ಇದೆ. ಬಡತನದಿಂದ ಮೇಲೆ ತರುವುದು ಮೀಸಲಾತಿ ಎಂಬುದು ಎಲ್ಲರ ತಪ್ಪು ಕಲ್ಪನೆ. ಆದರೆ ನಿಜವಾದ ಅರ್ಥದಲ್ಲಿ ಮೀಸಲಾತಿ ಎಂಬುದು ಸಮಾನತೆ ಹಾಗೂ ಪ್ರಾತಿನಿಧ್ಯ ನೀಡುವುದು ಎಂದರ್ಥ. ಮೀಸಲಾತಿ ಎಂದರೆ ಮೊದಲಿಗೆ ದಲಿತರು, ಅಂಬೇಡ್ಕರ್ ನೆನಪಾಗುತ್ತಾರೆ. ಆದರೆ ದಲಿತರಿಗೆ ಮಾತ್ರವಲ್ಲದೆ ಎಲ್ಲರಿಗೂ ಮೀಸಲಾತಿ ಸಿಗುತ್ತಿದೆ ಎಂದರು.
ಮನುವಾದಿಗಳು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸೇನೆಯೊಂದನ್ನು ಬಿಟ್ಟು ಉಳಿದೆಲ್ಲವನ್ನು ಖಾಸಗೀಕರಣ ಮಾಡಲು ಮನುವಾದಿಗಳು ಹೊರಟ್ಟಿದ್ದಾರೆ. ಶಿಕ್ಷಣ ದುಬಾರಿಯಾಗಿದೆ. ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಣದಿಂದ ವಂಚಿತರಾದವರು ಸಹ ಮನುವಾದಿಗಳಾಗಿ ರೂಪುಗೊಳ್ಳುತ್ತಾರೆ. ಇದೆಲ್ಲವನ್ನು ತಪ್ಪಿಸುವ ನಿಟ್ಟಿನಲ್ಲಿಯೇ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದರು. ಆದರೆ ನಾವಿಂದು ಸಂವಿಧಾನದ ಆಶಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಯೋಜನಾ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರಯ್ಯ, ಮಂಡ್ಯದ ಜಿಲ್ಲಾ ಆಡಳಿತ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿದ್ಧಸ್ವಾಮಿ, ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಉಪಸ್ಥಿತರಿದ್ದರು.







