ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಹೊಸತನವಿಲ್ಲ: ಕುಮಾರಸ್ವಾಮಿ

ಮ್ಯಸೂರು,ಎ.27: ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಯಾವುದೇ ಹೊಸತನವಿಲ್ಲ. ಐದು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏನು ಕೊಡುಗೆ ನೀಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಅವರ ಪರವಾಗಿ ಮತಯಾಚನೆ ಮಾಡಲು ಶುಕ್ರವಾರ ಮೈಸೂರಿಗೆ ಆಗಮಿಸಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಹೊಸತನವಿಲ್ಲ. ಮತ್ತೆ ರಾಜ್ಯ ಕೊಳ್ಳೆ ಹೊಡೆಯುವ ಪ್ರಣಾಳಿಕೆ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ರಾಜ್ಯ ಪ್ರವಾಸದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಅವರಿಗೆ ಇಲ್ಲಿನ ಸತ್ಯ ಗೊತ್ತಿಲ್ಲ. ಕೈ ನಾಯಕರು ಬರೆದುಕೊಟ್ಟ ಭಾಷಣವನ್ನಷ್ಟೇ ಓದುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸರಕಾರ ನೀಡುತ್ತಿರವು ಪುಕ್ಕಟ್ಟೆ ಅಕ್ಕಿಯನ್ನು ಸಿದ್ದರಾಮಯ್ಯನ ಹುಂಡಿಯಿಂದ ತಂದು ಕೊಡುತ್ತಿಲ್ಲ, ನಿಮ್ಮ ದುಡ್ಡನ್ನೇ ಲೂಟಿ ಮಾಡಿ ನಿಮಗೆ ನೀಡಲಾಗುತ್ತಿದೆ. ರಾಜ್ಯ ಸರಕಾರ ನೀಡುತ್ತಿರುವ ಜಾಹೀರಾತಿನ ಹಣ ನಿಮ್ಮದೆ. ಸಾರ್ವಜನಿಕರ ತೆರಿಗೆಯಿಂದ ಬಂದ ಹಣವನ್ನು ಲೂಟಿಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಚಿಕ್ಕಬಳ್ಳಾಪುರದ ಜೆಡಿಎಸ್ ಕಾರ್ಯಕರ್ತನ ಹತ್ಯೆ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿದೆ. ಈ ರೀತಿ ಹಿಂಸೆಯ ಮೂಲಕ ಜೆಡಿಎಸ್ ಶಕ್ತಿಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಇದಕ್ಕೆ ಅಹಿಂಸಾತ್ಮಕವಾಗಿ ಉತ್ತರ ಕೊಡುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ. ಮೃತನ ಮನೆಗೆ ನಾನು ಭೇಟಿ ಕೊಟ್ಟು ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳುವುದಾಗಿ ತಿಳಿಸಿದರು.







