ಕೊಪ್ಪ: ಚುನಾವಣಾ ಬಹಿಷ್ಕಾರದ ಎಚ್ಚರಿಕೆ; ಬರಕನಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಅಧಿಕಾರಿಗಳು

ಜಯಪುರ, ಎ.27: ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ನಮ್ಮ ಊರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಎಲ್ಲಾ ಸರಕಾರಗಳು ನಿರ್ಲಕ್ಷ್ಯತೋರಿವೆ ಎಂದು ಆರೋಪಿಸಿ ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪದ ಬರಕನಕಟ್ಟೆ ಗ್ರಾಮಸ್ಥರು ಗುರುವಾರ ತಹಶೀಲ್ದಾರ್ ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಕ್ಕೆ ತಾಲೂಕಿನ ಜಯಪುರ ಹೋಬಳಿಯ ಆರ್‍ಐ ಹಾಗೂ ವಿಎ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅಹವಾಲು ಆಲಿಸಿದರು.
ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ವೆಂಕಟೇಶ್, ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಮತ ಪಡೆಯುವ ಜನಪ್ರತಿನಿಧಿಗಳು ಯಾವುದೇ ಸಮರ್ಪಕವಾದ ಸೌಕರ್ಯವನ್ನು ನಮಗೆ ನೀಡಿಲ್ಲ. ಈ ಕಾರಣಕ್ಕೆ ಈ ಭಾರಿಯ ವಿಧಾನಸಭಾ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದೇವೆ ಎಂದ ಅವರು, ಗ್ರಾಮದಲ್ಲಿ ನಿವಾಸಿಗಳು ಕುಡಿಯುವ ನೀರು, ರಸ್ತೆ, ನಿವೇಶನ ಸಮಸ್ಯೆ, ಆಶ್ರಯ ಮನೆ, ಶೌಚಾಲಯಗಳನ್ನು ಒದಗಿಸುವಲ್ಲಿ ಗ್ರಾಪಂ ನಿರ್ಲಕ್ಷ್ಯ ನೀಡದಿರುವುದರ ಬಗ್ಗೆ ಅಧಿಕಾರಿಗಳ ಗಮನಸೆಳೆದರು.
ಸುಮಾರು 150 ಪರಿಶಿಷ್ಟ ಜಾತಿಯ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದು, ವ್ಯವಸ್ಥಿತವಾದ ಕುಡಿಯುವ ನೀರಿಲ್ಲ. ಬಹಳ ಹಿಂದೆ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಬಸರೀಕಟ್ಟೆಯಿಂದ ಊರಿಗೆ ಬರುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಊರಿನ ಒಳಭಾಗದ ರಸ್ತೆಗಳು ಯಾವುದೂ ಆಗಿರುವುದಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅತೀ ಹೆಚ್ಚು ಸೌಲಭ್ಯ ಹಾಗೂ ಅನುದಾನ ನೀಡುತ್ತೇವೆ ಎಂದು ಪ್ರಚುರ ಪಡಿಸುವ ಜನಪ್ರತಿನಿಧಿಗಳು ಈ ಭಾಗಕ್ಕೆ ಬಂದು ನೋಡಿದರೆ ಅವರ ಸುಳ್ಳು ಆಶ್ವಾಸನೆಗಳಿಗೆ ಸಾಕ್ಷಿ ದೊರಕುತ್ತದೆ. ಈ ಎಲ್ಲಾ ಕಾರಣದಿಂದ ನಾವು ಚುನಾವಣೆಗೆ ಬಹಿಷ್ಕಾರ ಹಾಕುತ್ತಿದ್ದೇವೆ ಎಂದರು.
ಈ ವೇಳೆ ಕಂದಾಯ ಅಧಿಕಾರಿ ನಾಗರಾಜ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಿಮ್ಮ ಹಕ್ಕು ಹಾಗೂ ಕರ್ತವ್ಯ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೇವಲ ಚುನಾವಣಾ ಬಹಿಷ್ಕಾರದಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿ ಮತದಾನ ಮಾಡಲು ಮನವಿ ಮಾಡಿದರು.
ಶಾಸಕ ಜೀವರಾಜ್‍ರವರ ಅಧಿಕಾರವಧಿಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಹಾಗೂ ಬಸರೀಕಟ್ಟೆಯಿಂದ ಬರಕನಕಟ್ಟೆಗೆ 4 ಕಿ.ಮೀ. ಡಾಂಬರೀಕರಣ ರಸ್ತೆಯಾಗಿದ್ದು, 1.5 ಕಿ.ಮೀ ರಸ್ತೆ ದುರಸ್ತಿಯಾಗಬೇಕಾಗಿದೆ. ಕುಡಿಯುವ ನೀರಿಗೆ ಗ್ರಾ.ಪಂ. ಅನುದಾನದಲ್ಲಿ ಬೋರ್‍ವೆಲ್ ಹಾಗೂ ತೆರೆದ ಬಾವಿ ತೆರೆದಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಲನಿಗೆ ಜಿ.ಪಂ. ಹಾಗೂ ತಾ.ಪಂ.4 ಲಕ್ಷ ರೂ. ಅನುದಾನದಲ್ಲಿ 400 ಮೀ. ಕಾಂಕ್ರಿಟ್ ರಸ್ತೆಯಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆ ನಿರ್ಮಿಸಲಾಗುವುದು.
-ವೆಂಕಟಕೃಷ್ಣ ಹೆಬ್ಬಾರ್, ಅತ್ತಿಕೊಡಿಗೆ ಗ್ರಾ.ಪಂ. ಅಧ್ಯಕ್ಷ







