ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಉದ್ಯೋಗ ಪರ್ಮಿಟ್ ಬಂದ್
ಡೆಮಾಕ್ರಟಿಕ್ ಸಂಸದರ ವಿರೋಧ

ವಾಶಿಂಗ್ಟನ್, ಎ. 27: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಅವಕಾಶ ನೀಡುವ ಒಬಾಮ ಕಾಲದ ಕಾನೂನನ್ನು ರದ್ದುಪಡಿಸುವ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ ಭಾರತೀಯ ಅಮೆರಿಕನ್ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಸರಕಾರದ ನಿರ್ಧಾರದಿಂದ ಸಾವಿರಾರು ಭಾರತೀಯರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.
ಎಚ್-1ಬಿ ವೀಸಾವನ್ನು ಅತ್ಯಂತ ನಿಪುಣ ವಿದೇಶೀಯರಿಗೆ ಅಮೆರಿಕದಲ್ಲಿ ಕೆಲಸ ಮಾಡುವುದಕ್ಕಾಗಿ ನೀಡಲಾಗುತ್ತದೆ. ಅವರ ಪತಿ ಅಥವಾ ಪತ್ನಿಯರಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ.
ಈಗ, ಉದ್ಯೋಗ ಪರ್ಮಿಟ್‌ಗಳನ್ನು ಹೊಂದಿದ 70,000ಕ್ಕೂ ಅಧಿಕ ಎಚ್-4 ವೀಸಾದಾರರು ಅಮೆರಿಕದಲ್ಲಿದ್ದಾರೆ.
‘‘ಎಚ್-4 ವೀಸಾಗಳನ್ನು ಹೆಚ್ಚು ಪಡೆಯುವುದು ಮಹಿಳೆಯರು. ಅವರು ತಮ್ಮ ಗಂಡಂದಿರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಅರ್ಹತೆ ಹೊಂದಿದ್ದಾರೆ. ಇನ್ನು ಅವರಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ’’ ಎಂದು ಭಾರತಿಯ ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
ಅವರು ‘ಅಮೆರಿಕ ಭಾರತ ಫ್ರೆಂಡ್‌ಶಿಪ್ ಕೌನ್ಸಿಲ್’ ಇಲ್ಲಿನ ಅಮೆರಿಕನ್ ಸಂಸತ್‌ನಲ್ಲಿ ಏರ್ಪಡಿಸಿದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದರು.
‘‘ಎಚ್-4 ವೀಸಾ ಹೊಂದಿರುವವರಿಗೆ ಉದ್ಯೋಗ ಪರ್ಮಿಟ್‌ಗಳನ್ನು ನೀಡುವುದನ್ನು ನಿಲ್ಲಿಸುವುದನ್ನು ನಾನು ವಿರೋಧಿಸುತ್ತೇನೆ’’ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದ ಪ್ರಥಮ ಭಾರತೀಯ ಅಮೆರಿಕನ್ ಮಹಿಳೆ ಪಿಟಿಐಗೆ ಹೇಳಿದರು.







