ಕಡೂರು: ಕಾಂಗ್ರೆಸ್ ಬೆಂಬಲಿಗರು ಜೆಡಿಎಸ್ ಸೇರ್ಪಡೆ

ಕಡೂರು, ಎ.27: ವೀರಶೈವ ಸಮಾಜದ ಮುಖಂಡ ಹೊಸಹಳ್ಳಿ ಎಚ್.ಎಂ.ಲೋಕೇಶ್ ಮತ್ತು ಬೆಂಬಲಿಗರು ಶುಕ್ರವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಅವರ ಸಮ್ಮುಖದಲ್ಲಿ ಜೆಡಿಎಸ್‍ಗೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಸ್ವಾಗತಿಸಿದ ಅಭ್ಯರ್ಥಿ ವೈ.ಎಸ್.ವಿ.ದತ್ತ ಮಾತನಾಡಿ, ವೀರಶೈವ ಸಮಾಜದ ಮುಖಂಡ ಎಚ್.ಎಂ.ಲೋಕೇಶ್ ಅವರು ತಮ್ಮ ಅಪಾರ ಬೆಂಬಲಿಗರೊಡನೆ ಜೆಡಿಎಸ್ ಗೆ ಸೇರ್ಪಡೆಯಾಗಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಉತ್ಸಾಹ ತುಂಬಿದೆ. ಅವರು ಸಾಂಕೇತಿಕವಾಗಿ ಪಕ್ಷ ಸೇರಿದ್ದಾರೆ. ಶೀಘ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅವರ ಬೆಂಬಲಿಗರು ಪಕ್ಷಕ್ಕೆ ಸೇರಲಿದ್ದಾರೆ. ಅವರ ಆಗಮನ ಪಕ್ಷಕ್ಕೆ ಮತ್ತು ನನಗೆ ಸ್ಥೈರ್ಯ ತಂದಿದೆ ಎಂದು ತಿಳಿಸಿದರು.
ಎಚ್.ಎಂ.ಲೋಕೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲದಾಗಿದೆ. ಅಲ್ಲಿನ ಉಸಿರುಗಟ್ಟಿಸುವ ಪರಿಸ್ಥಿತಿಯಿಂದ ಬೇಸತ್ತು ಮಾತೃಪಕ್ಷಕ್ಕೆ ಮರಳಿದ್ದೇನೆ. ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ನಾನು ಮತ್ತು ನನ್ನ ಬೆಂಬಲಿಗರು ಜೆಡಿಎಸ್ ಸೇರಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಸೀಗೆಹಡ್ಲುಹರೀಶ್, ಬಿದರೆ ಜಗದೀಶ್, ಹುಳಿಗೆರೆ ಚಂದನ, ಕಂಸಾಗರಶೇಖರ್, ಕುಪ್ಪಾಳು ಆರಾಧ್ಯ, ಯರದಕೆರೆ ರಾಜಪ್ಪ, ಎನ್.ಕೆ. ಇಮಾಮ್, ಸೋಮಯ್ಯ ಇದ್ದರು.







