ಮದ್ದೂರು: ಕೆ.ಹೊನ್ನಲಗೆರೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ರೋಡ್ ಶೋ

ಮದ್ದೂರು, ಎ.27: ತಾಲೂಕಿನ ಕೆ.ಹೊನ್ನಲಗೆರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಪಕ್ಷದ ಅಭ್ಯರ್ಥಿ ಡಿ.ಸಿ.ತಮ್ಮಣ ಜತೆ ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಮಗ ನಿಖಿಲ್‍ಕುಮಾರ್ 10 ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ನಿನ್ನೆ ಮಳವಳ್ಳಿಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದು, ತುಂಬಾ ದಣಿದಿದ್ದರು. ರಾತ್ರಿ 9ಗಂಟೆಯ ಬಳಿಕ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂಬ ಸಂಹಿತೆಯಿರುವುದರಿಂದ ಅವರು ಕೆ.ಹೊನ್ನಲಗೆರೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಬಂದು ತಮ್ಮ ಕ್ಷಮೆ ಯಾಚಿಸುತ್ತಿರುವೆ. ದಯಮಾಡಿ ಈ ಬಗೆಗೆ ಯಾರು ಕೂಡ ಬೇಸರಿಸದೇ ಶಾಸಕ ಡಿ.ಸಿ.ತಮ್ಮಣ್ಣ ಅವರ ಪರವಾಗಿ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಈ ಭಾಗದ ಶಿಂಷಾನದಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವೆ. ಅಲ್ಲದೇ ಈ ಭಾಗದ ಎಲ್ಲಾ ಹಳ್ಳಿಗಳಿಗೆ ಶಿಂಷಾ ನದಿಯಿಂದ ಶುದ್ದ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಿದ್ದೇನೆ. ತಾವು ನನ್ನನ್ನು ಮತ್ತೊಮ್ಮೆ ಶಾಸಕನಾಗಿಸಿದರೆ ಈ ಎಲ್ಲಾ ಯೋಜನೆಗಳು ಸಾಕಾರಗೊಳ್ಳಲು ಸಾಧ್ಯ ಎಂದರು.
ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಮಾತನಾಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿಯೇ ಮಾತೃ ಪಕ್ಷಕ್ಕೆ ಬಂದಿದ್ದು, ನನ್ನೆಲ್ಲಾ ಬೆಂಬಲಿಗರು ಶಾಸಕ ಡಿ.ಸಿ.ತಮ್ಮಣ್ಣ ಅವರ ಗೆಲುವಿಗೆ ಸಹಕರಿಸಬೇಕೆಂದು ಕೋರಿದರು.
ಮಾಜಿ ಶಾಸಕ ಡಾ.ಮಹೇಶಚಂದ್, ಜಿಪಂ ಸ್ಥಾಯಿ ಸಮಿತಿ ಅದ್ಯಕ್ಷ ಬೋರಯ್ಯ, ಮುಖಂಡರಾದ ಎಸ್.ಪಿ.ಸ್ವಾಮಿ, ಸಿ.ಟಿ.ಶಂಕರ್, ಮಾದನಾಯಕನಹಳ್ಳಿ ರಾಜಣ್ಣ, ಎನ್.ಆರ್.ಪ್ರಕಾಶ್, ತೊಪ್ಪನಹಳ್ಳಿ ಪ್ರಕಾಶ್, ಕೂಳಗೆರೆ ಶೇಖರ್, ಮಹೇಂದ್ರ, ಆರ್.ಸಿ.ಶಿವಲಿಂಗೇಗೌಡ, ಕೆಂಗಲ್‍ಗೌಡ, ಎನ್.ಆರ್.ರಾಜು, ಬ್ಯಾಡರಹಳ್ಳಿ ಶಿವಕುಮಾರ್, ಇತರ ಮುಖಂಡರು ಹಾಜರಿದ್ದರು.







