ಪ್ರಕರಣ ಹಂಚಿಕೆ: ತೀರ್ಪು ಕಾದಿರಿಸಿದ ಸುಪ್ರೀಂ

ಹೊಸದಿಲ್ಲಿ, ಎ.27: ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರು ಪ್ರಕರಣಗಳನ್ನು ಹಂಚುವ ಕುರಿತಂತೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಆದರೆ ಶಾಂತಿ ಭೂಷಣ್ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳ ಹಂಚಿಕೆ ಕುರಿತಂತೆ ಕೊಲಿಜಿಯಂ ನಿರ್ಧರಿಸಬೇಕು ಎಂದಿದ್ದಾರೆ.
ಇದುವರೆಗೆ ಸರದಿಪಟ್ಟಿ ಹಾಗೂ ಪ್ರಕರಣಗಳ ಹಂಚಿಕೆ ಕುರಿತ ನಿರ್ಧಾರವನ್ನು ಮುಖ್ಯ ನ್ಯಾಯಮೂರ್ತಿಗಳೇ ನಿರ್ವಹಿಸುತ್ತಿದ್ದರು. ಪ್ರಕರಣಗಳ ಹಂಚಿಕೆಯನ್ನು ಹಲವು ನ್ಯಾಯಾಧೀಶರು ನಿರ್ವಹಿಸಿದರೆ ಗೊಂದಲ ಮೂಡುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ಇದಕ್ಕೂ ಮುನ್ನ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ಶಾಂತಿ ಭೂಷಣ್ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಪರಿಶೀಲಿಸಲು ನಿರ್ಧರಿಸಿತ್ತು ಹಾಗೂ ಅಟಾರ್ನಿ ಜನರಲ್ ವೇಣುಗೋಪಾಲ್ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರ ನೆರವು ಪಡೆಯಲು ನಿರ್ಧರಿಸಿತ್ತು.





