ಅರ್ಹರನ್ನು ಆರಿಸೋಣ
ಮಾನ್ಯರೇ,
ಸರ್ವ ಧರ್ಮಗಳ ಸೌಹಾರ್ದಕ್ಕೆ ಹೆಸರಾಗಿರುವ ನಮ್ಮ ಕನ್ನಡ ನಾಡು ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಜಾತಿ ಧರ್ಮಗಳ ಭೇದವಿಲ್ಲದೆ ಭಾವೈಕ್ಯದ ತತ್ವದಡಿಯಲ್ಲಿ ಜನತೆ ಪರಸ್ಪರ ಸಹಾಯ ಸಹಕಾರದಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ನೆಮ್ಮದಿಯ ಮತ್ತು ಶಾಂತಿಯುತ ಜೀವನ ಸಾಗಿಸುತ್ತ ಬಂದಿದ್ದಾರೆ.
ಆದರೆ ಇತ್ತೀಚೆಗೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಧರ್ಮದ ಹೆಸರಿನಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತ ಜನರಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಇದರ ದುಷ್ಪರಿಣಾಮದಿಂದ ಅಲ್ಲಲ್ಲಿ ಕೋಮು ಗಲಭೆಗಳ ಕಿಚ್ಚು ಹೆಚ್ಚಾಗುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಇಂತಹ ರಾಜಕಾರಣಿಗಳ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಾಗಿದೆ. ಜಾತಿ, ಮತ, ಪಂಥ ಭೇದ ತೋರದ, ಸರ್ವರ ಹಿತ ಕಾಯುವ ಎಲ್ಲಾ ಧರ್ಮಗಳನ್ನು ಗೌರವಿಸುವ ಪ್ರೀತಿಸುವ ಏಕತೆಯ ಮನೋಭಾವ ಹೊಂದಿರುವ ವ್ಯಕ್ತಿಗಳಿಗೆ ಮತ ನೀಡೋಣ.
Next Story





