ಕೂಲಿ ಕೊಡದ ಕೆಲಸ

ವಿಳಂಬವಾಗಿ ಕೂಲಿ ಪಾವತಿ ಮಾಡುವುದು ಮತ್ತು ಸಮರ್ಪಕವಾಗಿ ಕೂಲಿ ಹೆಚ್ಚಿಸದಿರುವುದು ಮಹಾತ್ಮ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಸಾರವನ್ನೇ ಕಸಿಯುತ್ತಿದೆ.
ಸಮಯಕ್ಕೆ ಸರಿಯಾಗಿ ಕೂಲಿಯನ್ನು ಪಾವತಿಸುವುದು ಹಕ್ಕು ಆಧಾರಿತ ಕನಿಷ್ಠ ಆದಾಯ ಖಾತರಿ ಯೋಜನೆಯಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್‌ಆರ್‌ಇಜಿಎ- ನರೇಗಾ)ಯ ತಿರುಳಾಗಿದೆ. ಆದರೆ ಈ ಕಾಯ್ದೆಯ ಅನುಷ್ಠಾನವನ್ನು ಪರಿಶೀಲಿಸುತ್ತಲೇ ಬಂದಿರುವ ನರೇಗಾ ಸಂಘರ್ಷ್ ಮಂಚ್‌ನ ಪ್ರಕಾರ ಫೆಬ್ರವರಿಯಲ್ಲಿ ಶೇ. 64ರಷ್ಟು, ಮಾರ್ಚ್‌ನಲ್ಲಿ ಶೇ.86 ಮತ್ತು ಎಪ್ರಿಲ್‌ನಲ್ಲಿ ಶೇ.99 ರಷ್ಟು ಕೂಲಿ ಪಾವತಿ ಆದೇಶಗಳು ಜಾರಿಯಾಗಿರಲಿಲ್ಲ. ಈ ನರೇಗಾ ಯೋಜನೆಯಲ್ಲಿ ತಡವಾಗಿ ಕೂಲಿ ಪಾವತಿಯಾಗುವುದು ಹೊಸದೇನಲ್ಲವಾದರೂ, ನರೇಗಾ ಕೂಲಿ ಪಾವತಿ ವ್ಯವಸ್ಥೆಗೆ ಇತ್ತೀಚೆಗೆ ತರಲಾಗಿರುವ ತಿದ್ದುಪಡಿಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ನರೇಂದ್ರ ಮೋದಿ ಸರಕಾರವು ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್(ಎನ್‌ಇಎಫ್‌ಎಂಎಸ್-ರಾಷ್ಟ್ರೀಯ ವಿದ್ಯುನ್ಮಾನ ಸಂಪನ್ಮೂಲ ನಿಯಂತ್ರಣ ವ್ಯವಸ್ಥೆ)ಯಲ್ಲಿ ಯಾವುದೇ ಸೋರಿಕೆಯಾಗದಂತೆ ನೋಡಿಕೊಳ್ಳಲು ಕೂಲಿ ಪಾವತಿಗಳನ್ನು ಫಂಡ್ ಟ್ರಾನ್ಸ್‌ಫರ್ ಆರ್ಡರ್ (ಎಫ್‌ಟಿಒ- ಹಣ ವರ್ಗಾವಣೆ ಆದೇಶ)ನ ಮೂಲಕ ಮಾಡುವಂತೆ ಆದೇಶಿಸಿದೆ. ತದನಂತರದಲ್ಲಿ ಆಧಾರ್ ನೋಂದಾಯಿತ ಬ್ಯಾಂಕ್ ಖಾತೆಯ ಮೂಲಕ ಪಾವತಿ ಮಾಡುವ ಪದ್ಧತಿಯೂ ಜಾರಿಯಾಯಿತು. ಹಣ ವರ್ಗಾವಣೆಯಲ್ಲಿ ಯಾವುದೇ ಸೋರಿಕೆಯಾಗದೆ ಫಲಾನುಭವಿಗಳಿಗೆ ಸಂಪೂರ್ಣವಾಗಿ ದಕ್ಕಬೇಕೆಂಬ ಉದ್ದೇಶವು ಶ್ಲಾಘನೀಯವೇ ಆಗಿದ್ದರೂ ಆಚರಣೆಯಲ್ಲಿ ಹೊಸ ವ್ಯವಸ್ಥೆಯ ಪ್ರಾಯೋಗಿಕತೆ ಮತ್ತು ಬುಡಮಟ್ಟದಲ್ಲಿ ಅದರಿಂದ ಆಗುತ್ತಿರುವ ಪರಿಣಾಮಗಳು ಕಳವಳಕಾರಿಯಾಗಿವೆ. ಇಂತಹ ಕ್ರಮಗಳ ಅನುಷ್ಠಾನವನ್ನು ದಿನಗಳೆದಂತೆ ಸುಧಾರಿಸಬಹುದು. ಆದರೆ ಈ ಪದ್ಧತಿಯು ವಿಕೇಂದ್ರೀಕೃತ ಸಹಭಾಗಿ ಅಭಿವೃದ್ಧಿ ಪ್ರಕ್ರಿಯೆಯನ್ನೇ ತಿರುವು ಮುರುವು ಮಾಡಿಬಿಡುತ್ತ್ತದೆ.
ಹಳೆಯ ವರ್ತುಲ ನಿಧಿ ವ್ಯವಸ್ಥೆಯಲ್ಲಿ ಈ ಯೋಜನೆಯನ್ನು ಜಾರಿ ಮಾಡುವ ಪ್ರತಿ ಹಂತದ ಕಾರ್ಯಭಾರಿಯ ಬಳಿಯೂ ತಮ್ಮದೇ ಆದ ಖಾತೆಗಳು ಮತ್ತು ಹಣಪಾವತಿ ಮಾಡಲು ಅಧಿಕೃತ ಸಹಿ ಮಾಡುವ ಪ್ರಭಾರಿಯೂ ಇರುತ್ತಿದ್ದರು. ಇದು ಸ್ಥಳೀಯ ಸಂಸ್ಥೆಗಳ ಮೂಲಕ ವಿಕೇಂದ್ರೀಕೃತ ಅಭಿವೃದ್ಧಿಯನ್ನು ಬಲಗೊಳಿಸಲು ರೂಪಿಸಲಾಗಿದ್ದ ಸಂಪನ್ಮೂಲ ವರ್ಗಾವಣೆ ವ್ಯವಸ್ಥೆಯಾಗಿತ್ತು. ಆದರೆ ಎನ್‌ಇಎಫ್‌ಎಂಎಸ್ ವ್ಯವಸ್ಥೆಯಲ್ಲಿ ಇಡೀ ಸಂಪನ್ಮೂಲವು ಭಾರತ ಸರಕಾರದಡಿಯಲ್ಲಿ ಒಂದೇ ಖಾತೆಯಡಿ ಕೇಂದ್ರೀಕೃತಗೊಂಡಿರುತ್ತದೆ ಮತ್ತು ಅನುಷ್ಠಾನ ಮಾಡುವ ಸಂಸ್ಥೆಗಳಿಗೆ ಆಗುವ ಹಣ ವರ್ಗಾವಣೆಯು ಕೇವಲ ಸಾಂಕೇತಿಕವಾಗಿರುತ್ತದೆ. ನರೇಗಾ ಅನುಷ್ಠಾನ ಮಾಡುವ ಸಂಸ್ಥೆಗಳು ಎಫ್‌ಟಿಒ ಮೂಲಕ ಮಸ್ಟರ್ ರೋಲ್‌ನಲ್ಲಿರುವಂತೆ ಕೂಲಿ ಪಾವತಿ ಮಾಡಬೇಕಿರುವ ಪಟ್ಟಿಯನ್ನು ತಯಾರಿಸುತ್ತವೆ. ಪ್ರತಿ ಕೂಲಿ ಪಾವತಿಗೆ ಎಫ್‌ಟಿಒ ಸಿದ್ಧಪಡಿಸಿದ ಬಳಿಕ ಯೋಜನಾಧಿಕಾರಿಯು ಹಣ ಪಾವತಿ ಮಾಡಲು ಅದನ್ನು ಅಪ್‌ಲೋಡ್ ಮಾಡುತ್ತಾರೆ. ಸಾಮಗ್ರಿ-ಸರಂಜಾಮುಗಳ ಖರೀದಿಗೆ ಪಾವತಿ ಮಾಡಲು ಸಹ ಇದೇ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಲೂ ಮಾನವ ಮಧ್ಯಪ್ರವೇಶವೇ ಇಲ್ಲದಿರುವುದರಿಂದ ಸೋರಿಕೆಯೂ ಇರುವುದಿಲ್ಲ. ಆದರೆ ಇದರಲ್ಲಿ ಇಡೀ ಪ್ರಕ್ರಿಯೆಯನ್ನೇ ಬಲಹೀನಗೊಳಿಸಬಲ್ಲ ದೊಡ್ಡ ದೌರ್ಬಲ್ಯವೊಂದಿದೆ. ಮೊದಲನೆಯದಾಗಿ ಬಾಕಿ ಉಳಿದುಹೋಗುವ ಎಫ್‌ಟಿಒಗಳ ಸಮಸ್ಯೆ. ಮ್ಯನೇಜ್‌ಮೆಂಟ್ ಇನ್ಫಾರ್ಮೇಷನ್ ಡೇಟಾ (ಎಂಐಎಸ್)ದ ಪ್ರಕಾರ 2018ರ ಎಪ್ರಿಲ್ 19ರ ವೇಳೆಗೆ 2017-18ರಲ್ಲಿ ಸಲ್ಲಿಸಲಾದ ಎಫ್‌ಟಿಒಗಳಲ್ಲಿ ಶೇ.19.55ರಷ್ಟು ಇನ್ನೂ ಬಾಕಿ ಉಳಿದಿದ್ದವು ಮತ್ತು ಶೇ.2.38ರಷ್ಟು ತಿರಸ್ಕೃತವಾಗಿತ್ತು. ಒಟ್ಟಾರೆಯಾಗಿ ಶೇ.21.93ರಷ್ಟು ಎಫ್‌ಟಿಒಗಳು ಪಾವತಿಯಾಗಿರಲಿಲ್ಲ. ಈ ಬಾಕಿ ಉಳಿದ ಎಫ್‌ಟಿಒ ಸಮಸ್ಯೆಯಿಂದಾಗಿ ನರೇಗಾ ಕಾರ್ಮಿಕರ ಮತ್ತು ಸರಬರಾಜುದಾರರ ಖಾತೆಗಳಿಗೆ ಮೂರು-ನಾಲ್ಕು ತಿಂಗಳು ಅಥವಾ ಇನ್ನೂ ಹೆಚ್ಚು ಸಮಯ ಕಳೆದರೂ ಹಣ ಪಾವತಿಯಾಗುತ್ತಿಲ್ಲವೆಂದು ವಿವಿಧ ರಾಜ್ಯಗಳ ವರದಿಗಳು ಹೇಳುತ್ತಿವೆ.
ವಿವಿಧ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಕೂಲಿ ಮತ್ತು ಸಾಮಗ್ರಿ-ಸರಂಜಾಮು ಸರಬರಾಜುದಾರರಿಗೆ ಮಾಡಬೇಕಾದ ಪಾವತಿಗಳ ಮೊತ್ತವೂ ಇದಕ್ಕೆ ಪುರಾವೆಯೊದಗಿಸುತ್ತಿದೆ. ಹಿಂದೆ ಕೇಂದ್ರ ಸರಕಾರದಿಂದ ಹಣ ವರ್ಗಾವಣೆ ತಡವಾದರೆ ರಾಜ್ಯಗಳೇ ತಮ್ಮ ಸಂಪನ್ಮೂಲಗಳಿಂದ ಅದನ್ನು ಭರಿಸಿ ನಂತರ ಕೇಂದ್ರದಿಂದ ಪಡೆದುಕೊಳ್ಳುತ್ತಿದ್ದವು. ಈಗ ಅದೂ ಸಾಧ್ಯವಾಗುವುದಿಲ್ಲ. 2016-17ರಲ್ಲಿ ಒಟ್ಟಾರೆ ಈ ಯೋಜನೆಗೆ ನಿಗದಿಗೊಳಿಸಲಾಗಿದ್ದ ಮೊತ್ತದ ಕಾಲು ಭಾಗದಷ್ಟು ಅಂದರೆ 12,000 ಕೋಟಿ ರೂ. ಕೇಂದ್ರದಿಂದ ಬಾಕಿ ಉಳಿದಿತ್ತು. ಆಗ ಜಾರ್ಖಂಡ್ ಮತ್ತು ತ್ರಿಪುರಾ ಸರಕಾರಗಳು ತಮ್ಮ ಸಂಪನ್ಮೂಲಗಳಿಂದ ತಮ್ಮ ತಮ್ಮ ರಾಜ್ಯಗಳಲ್ಲಿ ಬಾಕಿ ಇದ್ದ ಹಣವನ್ನು ಪಾವತಿ ಮಾಡಿದವು. ಆದರೆ ಈಗ ಈ ಹೊಸ ಎನ್‌ಇಎಫ್‌ಎಂಎಸ್ ಪದ್ಧತಿಯಲ್ಲಿ ಅದು ಸಾಧ್ಯವೇ ಇಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರು ಈ ಯೋಜನೆಯಲ್ಲಿ ಕೆಲಸ ಮಾಡಿದ 15 ದಿನಗಳಲ್ಲಿ ತಮ್ಮ ಸಂಪೂರ್ಣ ಕೂಲಿಯನ್ನು ಪಡೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಕೂಲಿ ಪಾವತಿಯ ಖಾತರಿ ಇಲ್ಲದೆ ಕೆಲಸ ಖಾತರಿ ಯೋಜನೆಯು ತನ್ನ ಪರಿಣಾಮವನ್ನೇ ಕಳೆದುಕೊಳ್ಳುತ್ತದೆ. ಕಾಲ ಕಳೆದಂತೆ ಈ ಯೋಜನೆಯಡಿ ಕೆಲಸ ಮಾಡುವ ಉಮೇದನ್ನು ಕಾರ್ಮಿಕರು ಕಳೆದುಕೊಂಡು ಇನ್ನೂ ಅಭದ್ರತೆಯಿಂದ ಕೂಡಿರುವ ಕೆಲಸಗಳನ್ನು ಹುಡುಕಿಕೊಳ್ಳುತ್ತಾರೆ ಅಥವಾ ದಿಕ್ಕೆಟ್ಟು ವಲಸೆ ಹೋಗುತ್ತಾರೆ.
ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಡವರಿಗೆ ಪ್ರತಿ ದಿನ ಹಣದ ಅವಶ್ಯಕತೆ ಇರುತ್ತದೆ. ಹೀಗಾಗಿ ಈ ಯೋಜನೆಯಲ್ಲಿ ಕಾಲಕ್ಕೆ ಸರಿಯಾದ ಕೂಲಿ ಪಾವತಿಯಾಗದೇ ಇದ್ದಲ್ಲಿ ಅವರು ಪರ್ಯಾಯ ಉದ್ಯೋಗಗಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಕೂಲಿ ಪಾವತಿಯಲ್ಲಿ ಆಗುವ ವಿಳಂಬ ಮತ್ತು ಕೂಲಿಯ ಬಗೆಗಿನ ಅನಿಶ್ಚತೆಗಳು ನರೇಗಾ ಯೋಜನೆಯ ಸಾರವನ್ನೇ ಕಸಿಯುತ್ತಿವೆ. ಎರಡನೆಯದಾಗಿ, ಈ ಕೇಂದ್ರೀಕೃತ ಪ್ರಕ್ರಿಯೆಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಬದಲು ದುರ್ಬಲಗೊಳಿಸುತ್ತವೆ. ಈ ಪಂಚಾಯತ್‌ರಾಜ್ ಸಂಸ್ಥೆಗಳು ಕಳೆದ 25 ವರ್ಷಗಳಿಂದ ಒಕ್ಕೂಟ ವ್ಯವಸ್ಥೆಯ ಅಂತರ್ಗತ ಭಾಗವೇ ಆಗಿದ್ದರೂ ಮೇಲಿನಿಂದ ಅಧಿಕಾರಗಳು, ಕಾರ್ಯಭಾರಗಳು ಮತ್ತು ಕಾರ್ಯಭಾರಿ ಅಧಿಕಾರಿಗಳ ವರ್ಗಾವಣೆ ಯಾಗದಿರುವುದರಿಂದ ಅವು ದುರ್ಬಲವಾಗಿಯೇ ಉಳಿದುಕೊಂಡಿವೆ. ನರೇಗಾ ಯೋಜನೆಯು ಒಂದೇ ಬಾರಿಗೆ ಈ ಮೂರನ್ನೂ ಒದಗಿಸಿತ್ತು. ಹಲವಾರು ರಾಜ್ಯಗಳಲ್ಲಿ ಗ್ರಾಮ ಪಂಚಾಯತ್‌ಗಳು ಪ್ರಥಮ ಬಾರಿಗೆ ಬ್ಯಾಂಕ್ ಖಾತೆಯನ್ನು ತೆರೆದವಲ್ಲದೆ ತಮ್ಮ ಖಾತೆಯಲ್ಲಿ ನಿಯಮಿತವಾಗಿ ಹಣವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ್ದವು. ಆದರೆ ಗ್ರಾಮ ಪಂಚಾಯತ್‌ಗಳನ್ನು ಸಬಲೀಕರಿಸಿದ್ದ ಈ ಪ್ರಕ್ರಿಯೆಗಳು ಎನ್‌ಇಎಫ್‌ಎಮ್‌ಎಸ್ ಮತ್ತು ಎಫ್‌ಟಿಒಗಳನ್ನು ಜಾರಿಗೆ ತಂದ ನಂತರ ನಿಂತುಹೋದವು.
ವಿಳಂಬವಾಗಿ ಕೂಲಿ ಪಾವತಿ ಮಾಡುವ ಪದ್ಧತಿಯನ್ನು ಕೂಡಲೇ ಸರಿಪಡಿಸಬೇಕು. ಆದರೆ ಅಷ್ಟೇ ಮುಖ್ಯವಾಗಿ ಕೂಲಿ ದರದ ನೀತಿಯನ್ನು ಆಮೂಲಾಗ್ರವಾಗಿ ಪುನರ್‌ಪರಿಶೀಲಿಸುವ ಅಗತ್ಯವಿದೆ. ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೃಷಿ ಕೂಲಿಗಳ ಬಳಕೆದಾರರ ಸೂಚ್ಯಂಕವನ್ನು ಆಧರಿಸಿ ಕೂಲಿದರವನ್ನು ವಾರ್ಷಿಕವಾಗಿ ಪರಿಷ್ಕರಿಸುತ್ತದೆ. ಆದರೆ ಈಗ ಹಲವಾರು ರಾಜ್ಯಗಳಲ್ಲಿ ಕನಿಷ್ಠ ಕೂಲಿ ದರಗಳು ಮತ್ತು ವಾಸ್ತವ ಕೂಲಿ ದರಗಳು ನರೇಗಾದ ಕೂಲಿದರಗಳಿಗಿಂತ ಹೆಚ್ಚಿವೆ. ಇದು 2006ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದಾಗ ಇದ್ದ ಪರಿಸ್ಥಿತಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ. 2006ರಲ್ಲಿ ನರೇಗಾದಡಿ 60 ರೂ. ಕೂಲಿಯನ್ನು ನಿಗದಿಗೊಳಿಸಲಾಗಿತ್ತು. ಮತ್ತು ಅದು ಹಲವಾರು ರಾಜ್ಯಗಳ ನಿಗದಿತ ಕೃಷಿ ಕೂಲಿ ಹಾಗೂ ವಾಸ್ತವ ಕೃಷಿ ಕೂಲಿಗಿಂತ ಹೆಚ್ಚೇ ಆಗಿತ್ತು. ಅಧಿಕ ಕೂಲಿ ದರದಿಂದಾಗಿಯೇ ಈ ಯೋಜನೆಯು ಕೂಲಿಕಾರ್ಮಿಕರಿಗೆ ಆಕರ್ಷಕವಾಗಿ ಕಂಡಿತ್ತು. ಗ್ರಾಮೀಣ ಕಾರ್ಮಿಕ ಮಾರುಕಟ್ಟೆಯಲ್ಲಿ ಈ ಯೋಜನೆಯು ಗ್ರಾಮೀಣ ಕೂಲಿದರವನ್ನು ಹೆಚ್ಚಿಸಿತ್ತು.
ಆದರೆ ಇಂದು ಪರಿಸ್ಥಿತಿಯು ತದ್ವಿರುದ್ಧವಾಗಿರುವುದರಿಂದ ಹಲವಾರು ರಾಜ್ಯಗಳಲ್ಲಿ ನರೇಗಾ ಯೋಜನೆಯು ಕೂಲಿ ಕಾರ್ಮಿಕರನ್ನು ಆಕರ್ಷಿಸುತ್ತಿಲ್ಲ. ಇದರ ಒಂದು ಸೂಚನೆಯೇನೆಂದರೆ ಮಹಿಳಾ ಕಾರ್ಮಿಕರು ಈ ಯೋಜನೆಯಲ್ಲಿ ಸೇರುತ್ತಿದ್ದಾರೆ. ಆದರೆ ಪುರುಷ ಕಾರ್ಮಿಕರು ಮಾತ್ರ ಹೆಚ್ಚಿನ ಕೂಲಿ ಸಿಗುವ ಪರ್ಯಾಯ ಉದ್ಯೋಗವನ್ನು ಅರಸುತ್ತಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಕೂಲಿದರಕ್ಕಿಂತ ಕಡಿಮೆ ಕೂಲಿಯನ್ನು ಖಾತರಿಗೊಳಿಸುವುದು ಯಾವ ಬಗೆಯ ಖಾತರಿಯೂ ಅಲ್ಲ. ಕೂಲಿಯನ್ನು ಅಸ್ತಿತ್ವದಲ್ಲಿರುವ ದರಕ್ಕಿಂತ ಹೆಚ್ಚಿಗೆ ನಿಗದಿ ಪಡಿಸುವ ಮೂಲಕ ಮಾತ್ರ ನಿಜವಾದ ಜೀವನ ಖಾತರಿಯನ್ನು ಒದಗಿಸಲು ಸಾಧ್ಯ. ಕೂಲಿ ಪಾವತಿಯ ಖಾತರಿ ಮತ್ತು ಅಸ್ತಿತ್ವದಲ್ಲಿರುವ ಮಾರುಕಟ್ಟೆ ದರಕ್ಕೆ ಅನುಸಾರವಾಗಿ ಕನಿಷ್ಠ ಕೂಲಿ ದರವನ್ನು ಒದಗಿಸುವ ಮೂಲಕ ಮಾತ್ರ ನರೇಗಾ ಯೋಜನೆಯನ್ನು ಮತ್ತೊಮ್ಮೆ ಜನಪ್ರಿಯಗೊಳಿಸಲು ಸಾಧ್ಯ.
ಕೃಪೆ: Economic and Political Weekly







