ನಿಮಗೆ ಗೊತ್ತಿರಲಿ, ಇವೂ ಹೃದ್ರೋಗಗಳಿಗೆ ಕಾರಣವಾಗುತ್ತವೆ
ಸುದೀರ್ಘ ಕಾಲ ಆರೋಗ್ಯವಂತರಾಗಿ ಬದುಕಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಇದೇ ವೇಳೆ ಬದುಕು ಕ್ಷಣಿಕ ಮತ್ತು ಹೀಗೆಯೇ ಎಂದು ಹೇಳುವಂತಿಲ್ಲ ಎನ್ನುವುದೂ ನಮಗೆ ಗೊತ್ತಿರುತ್ತದೆ. ಅಪಘಾತಗಳು, ಕಾಯಿಲೆಗಳು ಇತ್ಯಾದಿ ಕಾರಣಗಳಿಂದ ಇಂದಿದ್ದವರು ನಾಳೆ ಇರುವುದಿಲ್ಲ. ಹೀಗಾಗಿ ನಮ್ಮ ಉಳಿವು ನಮ್ಮ ಕೈಯಲ್ಲಿಲ್ಲವಾದ್ದರಿಂದ ನಾವು ಹೆಚ್ಚೇನೂ ಮಾಡುವಂತಿಲ್ಲ ಎಂದು ಹೆಚ್ಚಿನವರು ಭಾವಿಸಿರುತ್ತಾರೆ.
ಇದು ನಿಜವಿರಬಹುದು,ಆದರೆ ಬದುಕಿದ್ದಷ್ಟು ದಿನ ಆರೋಗ್ಯವಂತ ರಾಗಿರಲು ನಾವು ಮಾಡಬಹುದಾದ ಕೆಲವು ವಿಷಯಗಳಂತೂ ಇವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿದ್ದರೆ ಆಯುಷ್ಯವು ತಾನಾಗಿಯೇ ವರ್ಧಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಶರೀರದ ಬಗ್ಗೆ ಮತ್ತು ಕಾಯಿಲೆಗಳನ್ನುಂಟು ಮಾಡುವ ಕಾರಣಗಳ ಬಗ್ಗೆ ಅರಿತು ಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಕಾಳಜಿ ವಹಿಸುವುದು ಅಗತ್ಯವಾಗಿದೆ.
ಹೃದಯವು ನಮ್ಮ ಶರೀರದ ಅತ್ಯಂತ ಪ್ರಮುಖ ಅಂಗಗಳಲ್ಲೊಂದು ಎನ್ನುವುದು ನಮಗೆ ಗೊತ್ತು. ಶರೀರದ ಇತರ ಎಲ್ಲ ಭಾಗಗಳಿಗೂ ಶುದ್ಧರಕ್ತವನ್ನು ಪೂರೈಸುವ ಕಾರ್ಯವನ್ನು ಹೃದಯವು ನಿರ್ವಹಿಸುತ್ತದೆ. ಹೃದಯದ ಕಾಯಿಲೆ ಇಂದು ಸಾಮಾನ್ಯವಾಗಿದ್ದು,ಸಾವಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಹೃದ್ರೋಗಗಳನ್ನುಂಟು ಮಾಡುವ ಕೆಲವು ಅಚ್ಚರಿಯ ಕಾರಣಗಳು ಇಲ್ಲಿವೆ.
► ಡಯಟ್ ಪಿಲ್
ಫಿಟ್ ಆಗಿ ಕಾಣಿಸಲು ಮತ್ತು ಆರೋಗ್ಯವಂತರಾಗಿರಲು ಬಯಸುವ ಪ್ರತಿಯೊಬ್ಬರೂ ಸರಿಯಾದ ಶರೀರದ ತೂಕವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ, ಹೆಚ್ಚಿನವರು ಸೂಕ್ತ ಆಹಾರವನ್ನು ಸೇವಿಸುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಬದಲು ಹಲವಾರು ಕೆ.ಜಿ.ಗಳಷ್ಟು ತೂಕವನ್ನು ಇಳಿಸುವ ಭರವಸೆಯೊಂದಿಗೆ ಬರುವ ಡಯಟ್ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಡಯಟ್ ಮಾತ್ರೆಗಳು ಅಪಧಮನಿಗಳಲ್ಲಿ ತಡೆಗಳನ್ನುಂಟು ಮಾಡಿ ಹೃದಯದ ಸ್ನಾಯುಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಹೃದ್ರೋಗಗಳಿಗೆ ಕಾರಣವಾಗುತ್ತವೆ.
► ಅವಧಿಗೆ ಮುನ್ನವೇ ಋತುಚಕ್ರ
ಹೆಣ್ಣುಮಕ್ಕಳು ಸಾಮಾನ್ಯವಾಗಿ 12 ಮತ್ತು 16 ವರ್ಷ ವಯೋಮಾನದ ನಡುವೆ ಮೈನೆರೆಯುತ್ತಾರೆ. ಪ್ರೌಢಾವಸ್ಥೆಯು ನೈಸರ್ಗಿಕ ಪ್ರಕ್ರಿಯೆಯಾ ಗಿದ್ದು,ಈ ಹಂತದಲ್ಲಿ ಶರೀರದಲ್ಲಿನ ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಯಾಗುತ್ತದೆ ಮತ್ತು ಪ್ರತಿ ತಿಂಗಳು ಋತುಸ್ರಾವವಾಗುತ್ತಿರು ತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಹೆಣ್ಣುಮಕ್ಕಳು 12 ವರ್ಷ ತುಂಬುವ ಮುನ್ನವೇ ರಜಸ್ವಲೆಯಾಗುತ್ತಾರೆ. ಇದು ಅವರ ರಕ್ತದಲ್ಲಿ ಹೆಚ್ಚಿನ ಈಸ್ಟ್ರೋಜನ್ ಮಟ್ಟವನ್ನು ಸೂಚಿಸುತ್ತದೆ. ಇದು ಭವಿಷ್ಯದಲ್ಲಿ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗಿ ಹೃದ್ರೋಗಗಳನ್ನು ತರಬಹುದು.
► ಪದೇ ಪದೇ ಜ್ವರ
ಜ್ವರ ವೈರಾಣಗಳ ವಿರುದ್ಧ ನಮ್ಮ ಶರೀರದ ಹೋರಾಟವನ್ನು ಸೂಚಿಸುವ ಲಕ್ಷಣವಾಗಿದೆ. ಜ್ವರದೊಂದಿಗೆ ನೆಗಡಿ,ಗಂಟಲಿನ ಸೋಂಕು,ಮೈಕೈ ನೋವು ಇತ್ಯಾದಿಗಳೂ ಜೊತೆಯಾಗಬಹುದು. ವ್ಯಕ್ತಿಯ ಶರೀರದ ಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ಮತ್ತು ಆಗಾಗ್ಗೆ ಫ್ಲೂ ಕಾಣಿಸಿಕೊಳ್ಳುತ್ತಿದ್ದರೆ ವೈರಾಣುಗಳು ಹೃದಯದ ಮಾರ್ಗಗಳನ್ನು ಆಕ್ರಮಿಸಿಕೊಂಡು ಅಂಗಾಂಶಗಳನ್ನು ದುರ್ಬಲಗೊಳಿಸುವುದರಿಂದ ಹೃದ್ರೋಗಕ್ಕೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.
► ಒಂಟಿತನ
ಒಂಟಿತನವೂ ಹೃದ್ರೋಗಕ್ಕೆ ಕಾರಣವಾಗುತ್ತದೆ ಎನ್ನುವ ಕಟುಸತ್ಯ ನಿಮಗೆ ಅಚ್ಚರಿಯನ್ನುಂಟು ಮಾಡಬಹುದು. ಆದರೆ ತಾವು ಒಂಟಿಯಾಗಿದ್ದೇವೆ ಮತ್ತು ತಮ್ಮನ್ನು ಪ್ರತ್ಯೇಕಿಸಲಾಗಿದೆ ಎಂದು ಭಾವಿಸುವ ವ್ಯಕ್ತಿಗಳು ಹೆಚ್ಚಿನ ಒತ್ತಡಕ್ಕೆ ಗುರಿಯಾಗುತ್ತಾರೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಇದರಿಂದಾಗಿ ಅವರು ಖಿನ್ನತೆಗೆ ಜಾರಿ ಮಿದುಳಿನಲ್ಲಿಯ ರಾಸಾಯನಿಕಗಳ ಮೇಲೆ ಪರಿಣಾಮವುಂಟಾಗುತ್ತದೆ. ಹೀಗಾದಾಗ ಮಾನಸಿಕ ಒತ್ತಡ ಮತ್ತು ಖಿನ್ನತೆಗಳು ಸೇರಿಕೊಂಡು ರಕ್ತದ ಒತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಇದು ಹಲವಾರು ಹೃದಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಒಂಟಿತನ ಮತ್ತು ಖಿನ್ನತೆ ಹೃದ್ರೋಗ ಗಳ ಅಪಾಯವನ್ನು ಶೇ.30ರಷ್ಟು ಹೆಚ್ಚಿಸುತ್ತವೆ ಎನ್ನುವುದನ್ನು ಸಂಶೋಧನೆಗಳು ಸಾಬೀತುಗೊಳಿಸಿವೆ.
► ಮದ್ಯಪಾನದ ಚಟ
ವ್ಯಕ್ತಿಯೋರ್ವ ನಿಯಮಿತವಾಗಿ ಊಟದೊಂದಿಗೆ ಮದ್ಯವನ್ನು ಸೇವಿಸುತ್ತಿದ್ದರೆ....ಅದು ಕೇವಲ ಒಂದು ಗ್ಲಾಸ್ ವೈನ್ ಅಥವಾ ಬಿಯರ್ ಆಗಿದ್ದರೂ ಅಪಧಮನಿಗಳನ್ನು ಪೆಡಸಾಗಿಸುವ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಹೃದ್ರೋಗಗಳ ಸಾಧ್ಯತೆಯು ಹೆಚ್ಚಾಗಿರುತ್ತದೆ. ಅಲ್ಲದೆ ಮದ್ಯಪಾನವು ದಿನನಿತ್ಯದ ಚಟವಾಗಿ ಪರಿಣಮಿಸುತ್ತದೆ ಮತ್ತು ಯಕೃತ್ತಿಗೂ ಹಾನಿಯನ್ನುಂಟು ಮಾಡುತ್ತದೆ.
► ಬಾಲ್ಯದಲ್ಲಿ ದೌರ್ಜನ್ಯ
ಮಕ್ಕಳು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗಿದ್ದಲ್ಲಿ ಅದು ಅವರ ಮುಂದಿನ ಬದುಕಿನಲ್ಲಿಯೂ ದುಃಸ್ವಪ್ನವಾಗಿ ಕಾಡುತ್ತಿರುತ್ತದೆ ಮತ್ತು ಇದು ಕೆಲವೊಮ್ಮೆ ವ್ಯಕ್ತಿಯ ಮಾನಸಿಕತೆಗೆ ಶಾಶ್ವತವಾದ ಹಾನಿಯನ್ನುಂಟು ಮಾಡುತ್ತದೆ ಮತ್ತು ಹಲವಾರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಮಾನಸಿಕ ಕಾಯಿಲೆಗಳು ಹೃದ್ರೋಗಗಳೊಡನೆ ನೇರವಾದ ನಂಟನ್ನು ಹೊಂದಿರುತ್ತವೆ.
► ಎಡಿಎಚ್ಡಿ ಚಿಕಿತ್ಸೆ
ಅಟೆನ್ಶನ್ ಡಿಫಿಸಿಟ್ ಹೈಪರ್ಆ್ಯಕ್ಟಿವಿಟಿ ಡಿಸಾರ್ಡರ್(ಎಡಿಎಚ್ಡಿ) ಒಂದು ಮಾನಸಿಕ ಕಾಯಿಲೆಯಾಗಿದ್ದು,ಪೀಡಿತ ವ್ಯಕ್ತಿಯ ಏಕಾಗ್ರತೆ ಕಡಿಮೆಯಾಗಿರುತ್ತದೆ,ಯಾವುದೇ ವಿಷಯದತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಸಿಡುಕು ಹೆಚ್ಚಾಗುತ್ತದೆ. ಅಲ್ಲದೆ ಇದು ಹೃದ್ರೋಗಗಳಿಗೂ ಕಾರಣವಾಗುತ್ತದೆ. ಈ ಕಾಯಿಲೆಯ ಚಿಕಿತ್ಸೆಗಾಗಿ ನೀಡುವ ಔಷಧಿಗಳು ರಕ್ತದೊತ್ತಡ ಮತ್ತು ಎದೆಬಡಿತವನ್ನು ಹೆಚ್ಚಿಸುತ್ತವೆ ಮತ್ತು ಅಂತಿಮವಾಗಿ ಹಲವಾರು ಹ್ರದ್ರೋಗಗಳನ್ನು ತರುತ್ತವೆ.
► ವಿಟಾಮಿನ್ ಡಿ ಕೊರತೆ
ನಮ್ಮ ಶರೀರವು ಆರೋಗ್ಯಯುತವಾಗಿರಲು ವಿಟಾಮಿನ್ಗಳು, ಪ್ರೋಟಿನ್,ಖನಿಜಗಳು,ಕೊಬ್ಬುಗಳು,ಕಾರ್ಬೊಹೈಡ್ರೇಟ್ಗಳಂತಹ ಎಲ್ಲ ಪೌಷ್ಟಿಕಾಂಶಗಳು ಅಗತ್ಯವಾಗಿವೆ. ವಿಟಾಮಿನ್ಗಳಲ್ಲಿ ಹಲವಾರು ವಿಧಗಳಿವೆ ಮತ್ತು ವಿಟಾಮಿನ್ ಡಿ ಕೂಡ ಮಹತ್ವದ ಪೌಷ್ಟಿಕಾಂಶ ವಾಗಿದೆ. ಈ ವಿಟಾಮಿನ್ ಕೊರತೆಯು ಹೆಚ್ಚಿನವರಲ್ಲಿ ಹೃದಯದ ಕಾಯಿಲೆಗೆ ಕಾರಣವಾಗುತ್ತದೆ.