ಉದ್ಯೋಗ ವೃದ್ಧಿ ದರ ವಾರ್ಷಿಕ ಕೇವಲ ಶೇ.1.8
ಸರಕಾರದ ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗ

ಹೊಸದಿಲ್ಲಿ,ಎ.28: ಭಾರತ ಸರಕಾರದ ಕಾರ್ಮಿಕ ಘಟಕವು ನಡೆಸುವ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ ಇತ್ತೀಚಿನ ವರದಿಯು ದೇಶದಲ್ಲಿ ಉದ್ಯೋಗ ವೃದ್ಧಿಯ ನೀರಸ ಚಿತ್ರಣವನ್ನು ಮುಂದಿಟ್ಟಿದೆ. ವರದಿಯು 2017 ಜುಲೈ-ಅಕ್ಟೋಬರ್ ಅವಧಿಗೆ ಸಂಬಂಧಿಸಿದೆ. 2016ರ ಮೊದಲ ತೈಮಾಸಿಕದಲ್ಲಿ ಇಂತಹ ಮೊದಲ ಸಮೀಕ್ಷೆಯನ್ನು ನಡೆಸಲಾಗಿದ್ದು, ಈಗಿನದು ಏಳನೇ ತ್ರೈಮಾಸಿಕ ವರದಿಯಾಗಿದೆ. 2016 ಎಪ್ರಿಲ್‌ನಿಂದ 2017ಅಕ್ಟೋಬರ್‌ವರೆಗಿನ ಎಲ್ಲ ತ್ರೈಮಾಸಿಕ ವರದಿಗಳನ್ನು ಸೇರಿಸಿದರೆ ಈ 18 ತಿಂಗಳ ಅವಧಿಯಲ್ಲಿ ಉದ್ಯೋಗಗಳ ಸಂಖ್ಯೆ ವಾರ್ಷಿಕ ಶೇ.1.8ರ ಅಲ್ಪದರದಲ್ಲಿ ಏರಿಕೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿದ್ದ 205.22 ಲಕ್ಷ ಉದ್ಯೋಗಗಳನ್ನು ಮೂಲ ಆಧಾರವಾಗಿಟ್ಟುಕೊಂಡು ಈ ಲೆಕ್ಕಾಚಾರವನ್ನು ಹಾಕಲಾಗಿದ್ದು,ಇದಕ್ಕೆ 18 ತಿಂಗಳ ಅವಧಿಯಲ್ಲಿ ಕೇವಲ 5.56 ಲಕ್ಷ ಉದ್ಯೋಗಗಳು ಸೇರ್ಪಡೆಗೊಂಡಿವೆ.
ತಯಾರಿಕೆ,ನಿರ್ಮಾಣ,ವ್ಯಾಪಾರ,ಸಾರಿಗೆ,ವಸತಿ ಮತ್ತು ರೆಸ್ಟೋರಂಟ್ ಗಳು,ಐಟಿ/ಬಿಪಿಒ,ಶಿಕ್ಷಣ ಮತ್ತು ಆರೋಗ್ಯ ಹೀಗೆ ಎಂಟು ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಉದ್ಯಮಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು.
ಕೈಗಾರಿಕಾ ಕ್ಷೇತ್ರದಲ್ಲಿ 18 ತಿಂಗಳ ಅವಧಿಯಲ್ಲಿ ಕೇವಲ 1.65ಲ.(ಶೇ.1.6)ಉದ್ಯೋಗಗಳು ಹೊಸದಾಗಿ ಸೇರ್ಪಡೆಗೊಂಡಿ ದ್ದರೆ, ನಿರ್ಮಾಣ ಕ್ಷೇತ್ರದಲ್ಲಿ 38,000 (ಶೇ.10ಕ್ಕೂ ಅಧಿಕ)ಉದ್ಯೋಗಗಳು ನಷ್ಟವಾಗಿವೆ. ವಸತಿ ಮತ್ತು ರೆಸ್ಟೋರಂಟ್ ಉದ್ಯೋಗ ನಷ್ಟವಾದ (ಶೇ.0.3)ಇನ್ನೊಂದು ಕ್ಷೇತ್ರವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣ(ಶೇ.8.5)ದಲ್ಲಿ ಉದ್ಯೋಗಗಳು ಹೆಚ್ಚಾಗಿವೆ. ಶಿಕ್ಷಣ ಕ್ಷೇತ್ರವೂ ಶೇ.4ರಷ್ಟು ಏರಿಕೆಯನ್ನು ದಾಖಲಿಸಿದೆ.







