ಜೈಲಿನಲ್ಲಿ ನನ್ನನ್ನು ಘೋರ ಪಾತಕಿಗಳೊಂದಿಗೆ ಇರಿಸಲಾಗಿತ್ತು: ಡಾ.ಕಫೀಲ್ ಖಾನ್

ಲಕ್ನೋ,ಎ.28: ‘‘ಜೈಲಿನಲ್ಲಿ ನನ್ನ ಅನುಭವ ಭಯಂಕರವಾಗಿತ್ತು. ನನ್ನನ್ನು ಘೋರ ಪಾತಕಿಗಳ ಜೊತೆ ಇರಿಸಲಾಗಿತ್ತು’’ ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದು ಶನಿವಾರ ಜೈಲಿನಿಂದ ಹೊರಗಡಿಯಿಟ್ಟ,ಗೋರಖಪುರದ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದ 60ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದ ಪ್ರಕರಣದ ಒಂಭತ್ತು ಆರೋಪಿಗಳ ಪೈಕಿ ಓರ್ವರಾಗಿರುವ ಡಾ.ಕಫೀಲ್ ಖಾನ್ ಸುದ್ದಿಗಾರರ ಬಳಿ ತನ್ನ ನೋವನ್ನು ತೋಡಿಕೊಂಡಿದ್ದು ಹೀಗೆ.ಅವರನ್ನು ಸ್ವಾಗತಿಸಲು ಜೈಲಿನ ಹೊರಗೆ ಕಾದು ನಿಂತಿದ್ದ ಕುಟುಂಬ ಸದಸ್ಯರು ಮತ್ತು ಬೆಂಬಲಿಗರಿಗೆ ಖಾನ್ ಬಿಡುಗಡೆ ಒಂದು ಭಾವೋದ್ವೇಗದ ಘಳಿಗೆಯಾಗಿತ್ತು.
ದುರಂತ ಸಂಭವಿಸಿದ್ದ ವೇಳೆ ಖಾನ್ ಅವರು ಸಮಯ ಪ್ರಜ್ಞೆಯನ್ನು ಮೆರೆದು ಇತರ ಆಸ್ಪತ್ರೆಗಳಿಂದ ಆಮ್ಲಜನಕದ ಸಿಲಿಂಡರ್‌ಗಳನ್ನು ತರಿಸಿಕೊಂಡು ಇನ್ನಷ್ಟು ಮಕ್ಕಳ ಬಲಿಯನ್ನು ತಪ್ಪಿಸಿದ್ದರು. ಇದಕ್ಕಾಗಿ ಅವರನ್ನು ಮೊದಲು ಕೊಂಡಾಡಲಾಗಿತ್ತಾದರೂ,ಬಳಿಕ ಸರಕಾರಿ ಆಸ್ಪತ್ರೆಯ ಸಿಲಿಂಡರ್‌ಗಳನ್ನು ಕದ್ದು ತನ್ನ ಖಾಸಗಿ ಕ್ಲಿನಿಕ್‌ನಲ್ಲಿ ಬಳಸಿಕೊಳ್ಳುತ್ತಿದ್ದ ಆರೋಪವನ್ನು ಹೊರಿಸಿ ಜೈಲಿಗೆ ತಳ್ಳಲಾಗಿತ್ತು. ಉಚ್ಚ ನ್ಯಾಯಾಲಯವು ಎ.25ರಂದು ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಅದಕ್ಕೂ ಕೆಲವು ದಿನಗಳ ಮುನ್ನ,ತಾನು ಹಲವಾರು ಮಕ್ಕಳ ಜೀವಗಳನ್ನು ಉಳಿಸಿದ್ದರೂ ಸರಕಾರವು ತನ್ನನ್ನು ಬಲಿಪಶುವನ್ನಾಗಿ ಮಾಡಿದೆ ಎಂದು ಆರೋಪಿಸಿ ಭಾವೋದ್ವೇಗದಿಂದ ಕೂಡಿದ ಪತ್ರವೊಂದನ್ನು ಅವರು ಜೈಲಿನಿಂದಲೇ ಬರೆದಿದ್ದರು.







