ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ರೋಡ್ ಶೋ

ಮಂಡ್ಯ, ಎ.28: ರಾಜ್ಯದ ರೈತಾಪಿ ಜನರು ಹಾಗೂ ಶ್ರೀಸಾಮಾನ್ಯರು ಸಂಕಷ್ಟದ ಬೇಗುದಿಯಲ್ಲಿ ಬಳಲುತ್ತಿದ್ದು, ಜನಪರವಾದ ಸರಕಾರವನ್ನು ತಂದು ಎಲ್ಲ ವರ್ಗದ ಜನರಿಗೆ ಪೂರಕವಾದ ಯೋಜನೆಗಳನ್ನು ಸಾಕಾರಗೊಳಿಸಲು ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಶನಿವಾರ ನಗರದ ಸೇರಿದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಂ.ಶ್ರೀನಿವಾಸ್ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಿ ಸಾಲದ ಶೂಲದಿಂದ ಮುಕ್ತಿ ಮಾಡಲಾಗುವುದು ಎಂದರು.
ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲವನ್ನೂ ಮನ್ನಾ ಮಾಡಲಿದ್ದು, ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಪಿಂಚಣಿ ಹೆಚ್ಚಿಸಲಿದೆ. ಜನಸಾಮಾನ್ಯರ ಅಭಿವೃದ್ಧಿಗೆ ನೆರವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಅವರು ಭರವಸೆ ನೀಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಶ್ರೀನಿವಾಸ್ ಜನಪರ ಕಾಳಜಿಯುಳ್ಳ ರಾಜಕಾರಣಿಯಾಗಿದ್ದಾರೆ. ಜನರ ಮಧ್ಯೆ ಬೆರೆತು ಹಗಲಿರುಳು ಜನರ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಇಂತಹ ವ್ಯಕ್ತಿಯನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಅವಕಾಶ ಕಲ್ಪಿಸಬೇಕೆಂದೂ ಅವರು ಮನವಿ ಮಾಡಿದರು.
ಈ ವೇಳೆ ಅಭ್ಯರ್ಥಿ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್, ಕೀಲಾರ ರಾಧಾಕೃಷ್ಣ, ಡಾ.ಕೃಷ್ಣ, ಅಶೋಕ್ ಜಯರಾಂ, ಡಿ.ರಮೇಶ್, ಕೆ.ಎಸ್.ವಿಜಯಾನಂದ, ಇತರ ಮುಖಂಡರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಗರದ ಗಡಿ ಗ್ರಾಮ ಕಲ್ಲಹಳ್ಳಿ ವೃತ್ತದಲ್ಲಿ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ನಗರಸಭಾ ಸದಸ್ಯ ಕೆ.ಸಿ.ರವೀಂದ್ರ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರವಿ, ಗ್ರಾಮದ ಮುಖಂಡರಾದ ರಾಜು, ಜಯಲಕ್ಷ್ಮಮ್ಮ, ಕಿರುತೆರೆ ನಟ ವಿಶಾಲ್‍ರಘು ಇತರರು ಜೆಡಿಎಸ್ ಮುಖಂಡರನ್ನು ಬರಮಾಡಿಕೊಂಡರು.







