ತ್ವರಿತಗತಿ ನ್ಯಾಯಾಲಯದ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ: ಮುಸ್ಲಿಮ್ ಸಂಘಟನೆಯ ಆಗ್ರಹ
ಮದ್ರಸದಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣ

ಹೊಸದಿಲ್ಲಿ, ಎ.29: ಉತ್ತರ ಪ್ರದೇಶದ ಗಾಝಿಯಾಬಾದ್ ನ ಮದ್ರಸವೊಂದರಲ್ಲಿ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣದ ಆರೋಪಿಯ ವಿರುದ್ಧ ತ್ವರಿತಗತಿ ನ್ಯಾಯಾಲವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸ್ ಎ ಮುಶವ್ವರತ್ (ಎಐಎಂಎಂಎಂ) ಒತ್ತಾಯಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ 17 ವರ್ಷದ ಬಾಲಕನೊಬ್ಬನನ್ನು ಹಾಗು ಮದ್ರಸದ ಧರ್ಮಗುರುವನ್ನು ಬಂಧಿಸಲಾಗಿದೆ. ತಪ್ಪು ಸಾಬೀತಾದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಎಐಎಂಎಂಎಂ ಅಧ್ಯಕ್ಷ ನವೈದ್ ಹಾಮಿದ್ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಮದ್ರಸವೊಂದರಲ್ಲಿ 17 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಯ ಅತ್ಯಾಚಾರಗೈದಿದ್ದ. ಮಾರುಕಟ್ಟೆಗೆ ತೆರಳಿದ್ದ ಬಾಲಕಿ ನಂತರ ನಾಪತ್ತೆಯಾಗಿದ್ದಳು. ಬಾಲಕಿ ಮನೆಗೆ ಹಿಂದಿರುಗದೇ ಇದ್ದುದರಿಂದ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಮೊಬೈಲ್ ಸಿಗ್ನಲ್ ಮೂಲಕ ಬಾಲಕಿ ಮದ್ರಸದಲ್ಲಿರುವುದನ್ನು ಪತ್ತೆ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಾಲಕನನ್ನು ಬಂಧಿಸಲಾಗಿತ್ತು.
“ಘಟನೆಯಿಂದ ಆಘಾತವಾಗಿದೆ. ತ್ವರಿತಗತಿ ನ್ಯಾಯಾಲಯದ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ. ಈ ಪ್ರಕರಣದಲ್ಲಿ ಮದ್ರಸ ಆಡಳಿತದ ಪಾತ್ರ ಬಗ್ಗೆಯೂ ತನಿಖೆಯಾಗಬೇಕು" ಎಂದು ಹಾಮಿದ್ ಆಗ್ರಹಿಸಿದ್ದಾರೆ.





