Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಒಳಪ್ಯಾಡ್ಲಿನಿಂದ ಸೀಟಿಗೆ

ಒಳಪ್ಯಾಡ್ಲಿನಿಂದ ಸೀಟಿಗೆ

ರೇಣುಕಾ ರಮಾನಂದರ ‘ಮೀನುಪೇಟೆಯ ತಿರುವು’

ಜಯಂತ ಕಾಯ್ಕಿಣಿಜಯಂತ ಕಾಯ್ಕಿಣಿ29 April 2018 5:22 PM IST
share
ಒಳಪ್ಯಾಡ್ಲಿನಿಂದ ಸೀಟಿಗೆ

          ರೇಣುಕಾ ರಮಾನಂದ

ರೇಣುಕಾ ರಮಾನಂದ ಅವರ ಈ ಕವಿತೆಗಳನ್ನು ಒಟ್ಟಿಗೇ ಓದುತ್ತ ಹೋದಂತೆ ಒಂದು ನಮೂನೆ ಉಮೇದಿ ಯ ಅವರ ಮನಸ್ಸು ನಮ್ಮನ್ನು ಆವರಿಸಿಕೊಳ್ಳುತ್ತದೆ. ಇದು ಕೇವಲ ಬರವಣಿಗೆಯ ಉಮೇದಿಯಲ್ಲ, ಬದಲಿಗೆ ಬದುಕಿನ ಕುರಿತಾದ ಉಮೇದಿ. ಚಲಿಸುವ ಬದುಕಿನಿಂದ ಬೇರ್ಪಟ್ಟು ನಿಂತು ಮಾತಾಡದೆ, ಒಟ್ಟಾರೆ ಬದುಕಿನ ನಿಬಿಡ ಹೆಣಿಗೆಯಲ್ಲಿ ಒಂದಾಗಿ ಸಂಪರ್ಕ ಸಾಧಿಸುವ ಉಮೇದಿ. ಈ ಗುಣವೇ ಈ ಕವಿತೆಗಳಿಗೊಂದು ಜೀವನಸತ್ವದ ಹಸಿಬಿಸಿತನವನ್ನು ತಂದು ಕೊಟ್ಟಿದೆ. ಕವಿತೆ ಕೇವಲ ಪ್ರತಿಸ್ಪಂದನವಾಗದೆ ಸಜೀವ ಸಂಪರ್ಕದ ಆವರಣವಾಗಿರುವುದರಿಂದಲೇ, ಇಲ್ಲಿನ ಅನೇಕ ಸಾಲುಗಳು ‘‘ಅಸಂಖ್ಯ ಬಟ್ಟೆ ಒಗೆಸಿಕೊಂಡ ಧೋಬಿ ಘಾಟಿನ ಕಲ್ಲಿನ ಹಾಗೆ’’ ಫಳಫಳ ಹೊಳೆಯುತ್ತವೆ. ‘‘ಸುಟ್ಟು ತಲೆತಿರುಪಿ ಇಟ್ಟ ಒಣ ಜಬ್ಬಿನಂತೆ’’ ಘಮ್ಮೆನ್ನುತ್ತವೆ. ‘‘ಹರಕು ಹವಾಯಿ ಚಪ್ಪಲಿ ಮೀರಿ ಒಳ ಬಂದು ಹಿಂಸಿಸುವ ಮುಳ್ಳಿನಂತೆ ತಾಗುತ್ತವೆ ಅಥವಾ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂ ಗಳಂತೆ ಹಾರಾಡುವ’’ ಚಿತ್ರಮಾಲೆಯನ್ನು ತಂದು ಕಣ್ಣಿಗೊತ್ತಿ ನಿಲ್ಲಿಸುತ್ತವೆ.

ಯಶವಂತ ಚಿತ್ತಾಲರು ಹೇಳುವಂತೆ ‘‘ಅನುಭವ ಯಾವಾಗಲೂ ನಮ್ಮ ಮನಸ್ಸಿನಲ್ಲಿ ಹಾಜರಿ ಕೊಡುವುದು ಪ್ರತಿಮೆಯ ಮೂಲಕ’’. ಈ ಪ್ರತಿಮೆಗಳು ಯಾವ ಅಂಗಡಿಯಲ್ಲೂ ಸಿಗುವುದಿಲ್ಲ. ನಮ್ಮನ್ನು ಪೋಷಿಸಿ ಬೆಳೆಸಿದ ಬದುಕಿನ ವಿವರಗಳೇ, ಮುಟ್ಟಿದರೆ ಮಿಡಿಯಬಲ್ಲ ಪ್ರತಿಮೆಗಳಾಗಿ ರಕ್ತಗತವಾಗಿರುತ್ತವೆ. ಬರವಣಿಗೆಯ ಒಂದು ಪ್ರಾಮಾಣಿಕ ಕ್ಷಣದಲ್ಲಿ ಒದಗಿ ಬರುತ್ತದೆ ಅಷ್ಟೆ. ನಾವು ಇಷ್ಟು ತೀವ್ರವಾಗಿ ಬದುಕುತ್ತೇವೆ ಎಂಬುದೇ ಅದರ ಜೀವಾಳ. ರೇಣುಕಾರ ಬರವಣಿಗೆಯಲ್ಲಿ ಇವು ಬರುವ ರೀತಿ ಆಪ್ತವಾಗಿದೆ.

ಜಡ್ಡುಗಡ್ಡಿದೆ ಅವ್ವನ ಹಸ್ತ

ಒನಕೆ ಕುಣಿತಕ್ಕೆ

ತುಂಬ ಅನುಕೂಲ ಅದು

ಒಲೆಯ ಮೇಲಿನ ತಪ್ಪಲೆ

ಬರಿಗೈಯಲ್ಲೇ ಇಳಿಸಲಿಕ್ಕೆ..

ನಮ್ಮದೀಗ ಹಠಾತ್ ಪಲ್ಲಟದ ಕಾಲ. ಭತ್ತದ ಗದ್ದೆ, ಬ್ಯೂಟಿ ಪಾರ್ಲರು ಎರಡೂ ಒಂದೇ ಆವರಣವನ್ನು ರೂಪಿಸುತ್ತಿರುವ, ಮೀನುಪೇಟೆಯಲ್ಲಿ ಜೀನ್ಸ್ ಅಂಗಡಿ ತೆರೆದಿರುವ ಕಾಲ. ನೆಟ್ಟ ಬೀಜ ಮೊಳಕೆಯೊಡೆವ ಮೊದಲೇ ಬರೆದದ್ದೆಲ್ಲ ‘ಪ್ರಕಟ’ಗೊಳ್ಳುವ ಕಾಲ. ಇಂಥಲ್ಲಿ ಕವಿಯ ಸಂವೇದನೆಗೆ ಸಾಣೆ ಹಿಡಿಯುವ ಸಂಗತಿಗಳು ಎಂದಿಗಿಂತ ವಿಪುಲ. ಆದರೆ ಅವು ಬರೇ ಮಾಹಿತಿಯಾಗಿ ಬಿಟ್ಟರೆ ರದ್ದಿಯಾಗುವ ಸುದ್ದಿಯಾಗುತ್ತವೆ. ಬದಲಿಗೆ ಅಂತರಂಗವನ್ನು ಕೆಣಕಿ ಕಾಡುವ ಸಂಗತಿಯಾದರೆ, ಒಂದು ಜೀವನದೃಷ್ಟಿಯನ್ನು ರೂಪಿಸುವಲ್ಲಿ ಸುಪ್ತವಾಗಿ ನಿರತವಾಗಿರುತ್ತವೆ.

ಈ ರಜೆಯಲ್ಲಿ ‘ಮಾಲ್’ಗೆ ಹೋದಾಗಲೊಮ್ಮೆ

ಮನೆಮಂದಿಯ ಕಣ್ಣು ತಪ್ಪಿಸಿ ನನ್ನ ಸೈಜಿನ

ಜೀನ್ಸ್ ಪ್ಯಾಂಟನ್ನೊಂದು ಕೊಳ್ಳಬೇಕು

ತೊಡಲಾಗದಿದ್ದರೂ ಸುಮ್ಮನೆ ಇಟ್ಟು

ಮುಟ್ಟಿ ತಟ್ಟಿ ಸಂಭ್ರಮಿಸಬೇಕು..

ಹೊರಟಲ್ಲಿಗೇ ಹೊರಟು ನಿಂತ

ಹಳೇ ಬಸ್ಸಿನ ಸವೆದ ಟಯರಿನಂತೆ

ಮೆಟ್ಟಿಕೊಂಡ ದೆವ್ವವನ್ನು

ಬಿಟ್ಟೋಡಿಸಲು ಕಾದು ನಿಂತ

ಕಹಿಬೇವಿನ ಗೊಂಚಲಿನಂತೆ..

ಉಪ್ಪು ಮೂಟೆ ಆಡುವಾಗ ತಪ್ಪಿಯೂ

ನೀ ನನಗೆ ಒಂದಾದರೂ ಮುತ್ತು ಕೊಟ್ಟು

ಓಡಿಹೋದ ನೆನಪಿಲ್ಲ..

ಅವಳು ಹೋದ ಲಾಗಾಯ್ತು

ಮುದ್ದು ಪದಗಳನ್ನೆಲ್ಲ ಕದ್ದು ಮಾರಲಾಗಿದೆ

ಸಂತೆಬೀದಿಗಳಲ್ಲಿ; ಈಗುಳಿದವು

ಹೂಳು ತುಂಬಿದ ಜವುಗು ಮಣ್ಣಿನೊಳಗೆ

ಬರೀ ಕಠಿಣಪದಗಳು.. ನಾನಾರ್ಥಕಗಳು..

ಇವೆಲ್ಲ ಚಿತ್ರಗಳ ಚಲನೆ ಒಂದು ಸಂಯುಕ್ತವಾದ ಆವರಣದ ಕಡೆಗೇ ಇದೆ. ಅದರಂತೆ ಕಾಲೇಜಿಗೆ ಹೋಗುವವರ ಎದುರು ಶಾಲೆಗೆ ಹೋಗದ ಬೆಟ್ಟಕ್ಕೆ ಹೋಗುವವರಿದ್ದಾರೆ, ಬೋಳು ಮರದ ಒಂಟಿ ಮುತ್ತುಗದ ಹೂವಿನ ಎದುರು ಅಂಗಳದ ಮಲ್ಲಿಗೆ ಇದೆ, ಎ.ಸಿ, ಪರ್‌ಫ್ಯೂಮಿನ ಎದುರು ಟ್ರಿಮ್ ಮಾಡದ ಹುಬ್ಬು, ತಾಜಾ ಬೆವರು ಇದೆ. ಇಂಥಲ್ಲಿ ಸುಲಭವಾಗಿ ಒಂದು ಬಾಗುವನ್ನು ಸರಳವಾದ ರಾಜಕೀಯ ಸಮರ್ಪಕತೆಯಲ್ಲಿ ಎತ್ತಿ ಮೆರೆಸಿಬಿಡಬಹುದು. ಆದರೆ ರೇಣುಕಾ ಅಂಥ ಪಡಿಯಚ್ಚಿನ ನಿಲುವಿಗೆ ಹಿಂಜರಿಯುತ್ತಾರೆ. ಅಂಥ ಹಿಂಜರಿಕೆಯಲ್ಲಿ ಅವರ ರಚನೆಗಳ ಸಹಜ ಉಸಿರಾಟವಿದೆ.

‘ಮಗುವಿನಂತಹ ಅಪ್ಪ’, ‘ಹೊಳೆದಂಡೆಯ ಹುಡುಗಿ’, ‘ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’, ‘ಮೀನುಪೇಟೆಯ ತಿರುವು’, ‘ಅವ್ವ ಮತ್ತು ಬೆಕ್ಕು’, ಅವರಿಗೆ.. ಇವರಿಂದ, ‘ಪೇಪರ್ ಹುಡುಗ’. ‘ಭತ್ತ ಬೆಳೆಯುವುದೆಂದರೆ’, ‘ಮೀನು ಪ್ರೈ ’- ಈ ಕವಿತೆಗಳು ಗೆದ್ದಿರುವುದೇ ತಮ್ಮ ಮುಕ್ತತೆಯಿಂದಾಗಿ. ಸರಳತೆಯಲ್ಲೇ ಸಾಧಿಸಿದ ತೀವ್ರತೆಯಿಂದಾಗಿ. ರೈತಾಪಿ ಸರಳ ಮನೆವಾರ್ತೆಯ ವಿವರಗಳು ಮೆಲ್ಲಗೆ ಒಂದು ಜೀವನಮೌಲ್ಯವಾಗಿ ಬಿಡುವಷ್ಟು ಅಪ್ಪಟವಾದ ಪಾರದರ್ಶಕವಾದ ರಚನೆಗಳು ಇವು. ನಾನು ಯಾವುದೇ ಸಂಕಲನ ಓದುವಾಗ, ಆ ಕವಿ ಮಾತ್ರ ಬರೆಯಬಹುದಾದದ್ದನ್ನು ಯಾರಾದರೂ ಯಾಕೆ ಬರೆಯಬೇಕು. ಅಂಥ ಐದಾರು ರಚನೆಗಳು ಸಿಕ್ಕರೂ ಹೊಸ ಒಕ್ಕಣಿಕೆಯೊಂದು ಸಿಕ್ಕಂಥ ಸಂಭ್ರಮವಾಗುತ್ತದೆ. ಸಣ್ಣ ಉತ್ತರ ಕನ್ನಡದ, ಅಂಕೋಲೆ ಸೀಮೆಯ ಮಿಸಳ್ ಬಾಜಿ ಸೊಲ್ಲುಗಳೂ ಇಲ್ಲಿನ ಹವಣಿಕೆಗಳ ರುಚಿಯನ್ನು ಹೆಚ್ಚಿಸಿವೆ. ‘ಫಸಗಿ ಬೀಳಿಸುವ ಹುನ್ನಾರು ಧಾರಿ’, ‘ಆಂಖ್ ಮಿಚೋಲಿ’, ‘ದೇಖರೇಖಿಯ ಹಿಲಾಲು’, ‘ಮಾಧುರ್ಯದ ಮಖಮಲ್ಲು’, ‘ಬಿಲ್ ಕುಲ್’, ‘ಅಜಿಬಾತ್’, ‘ಹುಕ್ಕಿ’, ‘ಮುಲಾಖಾತ್’, ಲಾಗೂ ಬಿದ್ದವು, ಇತ್ಯಾದಿ. ತನ್ನ ಆವರಣದೊಂದಿಗೆ ಮಾತನಾಡುವುದನ್ನೇ ತಮ್ಮ ಭಿತ್ತಿಯಾಗಿಸಿಗೊಂಡಿರುವ ಈ ರಚನೆಗಳು ಬಸ್‌ಸ್ಟ್ಯಾಂಡಿನ ಗೌಜಿಯಲ್ಲೂ ಒಮ್ಮಾಮ್ಮೆ ಹಠಾತ್ ಅನಿಯೋಜಿತ ಮೌನವೊಂದು ಕವಿಯುವಂತೆ ಅಲ್ಲಲ್ಲಿ ಮೌನ ತಾಳುವುದುಂಟು.

ಅಪ್ಪಟ ದೇಸಿ ಕವಯತ್ರಿ ರೇಣುಕಾ ಮಳೆನೀರು ತುಂಬಿ ನಿಂತ ಗದ್ದೆಗಳಲ್ಲಿ ಸಸಿಗಳನ್ನು ನೆಟ್ಟ್ಟು ಮಾಡಿದಂತೆ ಸಹಜವಾಗಿಯೂ, ಶಿಸ್ತುಬದ್ಧವಾಗಿಯೂ, ಗೊಂಚಲಾಗಿಯೂ, ನಾಜೂಕಾಗಿಯೂ ಹಸಿರುಕ್ಕುವಂತೆಯೂ, ಫಲವತ್ತಾಗಿಯೂ ಕಾವ್ಯಕೃಷಿ ಮಾಡುವ ಹಸನಾದ ಮನಸ್ಸುಳ್ಳವರು.

ಉತ್ತರ ಕನ್ನಡದ ಜನಪದ ಸೊಗಡನ್ನು ಕಾವ್ಯಲಯಕ್ಕೆ ತಂದು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವ ಹೊಸಕವಿಗಳಲ್ಲಿ ಇತ್ತೀಚೆಗೆ ರೇಣುಕಾ ಮುಂಚೂಣಿಯಲ್ಲಿರುವ ಹೆಸರು.

ಒಳ್ಳು, ಕಳ್ಳಬೀಜ, ತಪ್ಪಲೆ, ಕೇರುವ ಮೊರ, ಮುಷ್ಟಿ ಸೆಗಣಿ, ನುಚ್ಚು, ಉರಿ ಮೆಣಸು, ಮುತ್ತುಗದೆಲೆ, ರಸ ಒಸರುವ ರೊಟ್ಟಿ, ಅಬ್ಬಲಿಗೆ ಓಳಿ, ಮುಳಿಹುಲ್ಲ ಮಾಡು, ಹೊಗೆಯ ಭರತ.. ಇಂತಹ ಕರಾವಳಿ ತೀರದ ಸತ್ವಯುತ ಭಾಷಾ ಸೊಗಡಿನಿಂದಲೇ ಕವಿತೆಯನ್ನು ನಿಗಿನಿಗಿ ಜೀವಂತಿಕೆಯಲ್ಲಿ ಹದವಾಗಿ ಬೇಯಿಸುವ ನಿತಾಂತ ಶ್ರದ್ಧೆ ಕೂಡ ಅವರಲ್ಲಿದೆ.

ಕವಿತೆ ಅನ್ನೋದು ಕನ್ನಡಿ ಹೌದು. ಹಿಂದೆ ಮುಂದೆ ಅಕ್ಕಪಕ್ಕ ನಿಂತವರೆಲ್ಲ ಕಾಣಬೇಕಾದರೆ ಕವಿತೆ ಮೆಲ್ಲಗೆ ಕಿಟಕಿಯಾಗಬೇಕು. ಅಂತಹ ಕನ್ನಡಿಯೊಂದು ಕಿಟಕಿಯಾಗುತ್ತ ದಾಪುಗಾಲಿಡುವ ಲಕ್ಷಣಗಳೆಲ್ಲ ಇಲ್ಲಿವೆ. ಅಳಿವಿನ ಅಂಚಿನಲ್ಲಿರುವ ಸಾಮಾಜಿಕ ಕೌಟುಂಬಿಕತೆಯ ಸೊಲ್ಲುಗಳೂ ಇಲ್ಲಿವೆ. ಇದಕ್ಕೆ ಮೂಲ ಕಾರಣ ರೇಣುಕಾರ ಅದಮ್ಯ ಉಮೇದಿಯೇ ಆಗಿದೆ. ಒಳಪ್ಯಾಡ್ಲಿನಿಂದ ಮೆಲ್ಲಗೆ ಸೀಟಿಗೇರುತ್ತಿರುವ ಇವರ ಕಾವ್ಯಪುರಾಣದ ಉಮೇದಿಗೆ ಹೊಸಹೊಸ ತಿರುವುಗಳನ್ನು, ಸೇತುವೆಗಳನ್ನು, ಘಟ್ಟಗಳನ್ನು ಹಾರೈಸುತ್ತೇನೆ.

share
ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ
Next Story
X