ಐಪಿಎಲ್ : ಸನ್‌ರೈಸರ್ಸ್ 151/7

ಜೈಪುರ, ಎ.29: ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ 28ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿದೆ.
ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ರವಿವಾರ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ತಂಡ ರಾಯಲ್ಸ್‌ಗೆ ಕಠಿಣ ಸವಾಲು ವಿಧಿಸುವಲ್ಲಿ ಎಡವಿದೆ.
ನಾಯಕ ಕೇನ್ ವಿಲಿಯಮ್ಸ್ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಅವರು 63 ರನ್(43ಎ, 7ಬೌ, 2ಸಿ) ಗಳಿಸಿದರು. ಇವರನ್ನು ಹೊರತುಪಡಿಸಿದರೆ ಅಲೆಕ್ಸ್ ಹೇಲ್ಸ್ (45 ) ದೊಡ್ಡ ಕೊಡುಗೆ ನೀಡಿದರು.
ರಾಯಲ್ಸ್‌ನ ಜೋಫ್ರಾ ಆರ್ಚರ್ (26ಕ್ಕೆ 3), ಕೃಷ್ಣಪ್ಪ ಗೌತಮ್ (18ಕ್ಕೆ 2), ಜೈದೇವ್ ಉನಾದ್ಕಟ್ (33ಕ್ಕೆ 1) ಮತ್ತು ಐಶ್ ಸೋಧಿ(25ಕ್ಕೆ 1) ಅವರು ಸನ್‌ರೈಸರ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
3ನೇ ಓವರ್‌ನ ಮೊದಲ ಎಸೆತದಲ್ಲಿ ಸನ್‌ರೈಸರ್ಸ್ ತಂಡ ಆರಂಭಿಕ ದಾಂಡಿಗ ಶಿಖರ್ ಧವನ್(6) ವಿಕೆಟ್ ಕಳೆದುಕೊಂಡಿತ್ತು. ಧವನ್ ಅವರು ಗೌತಮ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆನಂತರ ಎರಡನೇ ವಿಕೆಟ್‌ಗೆ ಆರಂಭಿಕ ದಾಂಡಿಗ ಹೇಲ್ಸ್ ಮತ್ತು ನಾಯಕ ವಿಲಿಯಮ್ಸನ್ ಜೊತೆಯಾಗಿ ತಂಡದ ಖಾತೆಗೆ ಅಮೂಲ್ಯ 92 ರನ್ ಜಮೆ ಮಾಡಿದರು. ಹೇಲ್ಸ್ 45 ರನ್(39ಎ,4ಬೌ) ಗಳಿಸಿ ಔಟಾದರು. ವಿಲಿಯಮ್ಸ್ ಔಟಾದಾಗ ತಂಡದ ಸ್ಕೋರ್ 14.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 116 ಆಗಿತ್ತು. ಬಳಿಕ 34 ರನ್ ಸೇರುವ ಹೊತ್ತಿಗೆ ನಾಲ್ಕು ವಿಕೆಟ್‌ಗಳು ಪತನಗೊಂಡಿತು.
ಮನೀಷ್ ಪಾಂಡೆ (16) ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ (11) ಎರಡಂಕೆಯ ಕೊಡುಗೆ ನೀಡಿದರು. ಶಾಕಿಬ್ ಅಲ್ ಹಸನ್ 6ರನ್, ಯೂಸುಫ್ ಪಠಾಣ್ 2ರನ್ ಮತ್ತು ರಶೀದ್ ಖಾನ್ 1 ರನ್ ಗಳಿಸಿದರು.







