ಸಂವಿಧಾನ ಉಳಿಯಬೇಕೋ, ಬೇಡವೋ ಎಂಬುವುದು ಈ ಚುನಾವಣೆ ತೀರ್ಮಾನ ಮಾಡುತ್ತದೆ: ಸಿ.ಎಂ.ಇಬ್ರಾಹೀಂ

ಬಾಗಲಕೋಟೆ, ಎ.29: ಸ್ವತಂತ್ರ ಭಾರತದ 70 ವರ್ಷಗಳ ಇತಿಹಾಸದಲ್ಲಿ ಇಂತಹ ಚುನಾವಣೆಯನ್ನು ರಾಜ್ಯ ಕಂಡಿಲ್ಲ, ಮುಂದೆ ಕಾಣುವುದೂ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಉಳಿಯಬೇಕೋ, ಬೇಡವೋ ಎಂಬುದನ್ನು ಈ ಚುನಾವಣೆ ತೀರ್ಮಾನ ಮಾಡುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಹೇಳಿದ್ದಾರೆ.
ರವಿವಾರ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತ ಸಾಹಿತಿಗಳು ನಾಯಿಗಳಿಗೆ ಸಮಾನ, ನಾವು ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಹೇಳಿಕೆ ನೀಡುತ್ತಾರೆ ಎಂದರು.
ಆದರೆ, ಅವರ ಪಕ್ಕದಲ್ಲೆ ಮಂತ್ರಿಮಂಡಲದಲ್ಲಿ ರಮೇಶ್ ಜಿಗಜಿಣಗಿ ಕೂತಿದ್ದರೂ ಯಾವ ಪ್ರತಿಕ್ರಿಯೆಯೂ ನೀಡುವುದಿಲ್ಲ. ಅಂಬೇಡ್ಕರ್, ಬಾಬು ಜಗಜೀವನ್‌ರಾಮ್ ಮೇಲೆ ಅಭಿಮಾನವಿದ್ದರೆ ಮಂತ್ರಿ ಸ್ಥಾನ ಬಿಟ್ಟು, ಸಮಾಜದ ಜೊತೆಯಲ್ಲಿ ನಿಲ್ಲಲಿ ಎಂದು ಅವರು ಆಗ್ರಹಿಸಿದರು.
ದಲಿತ ಸಮಾಜಕ್ಕೆ ಸಿಕ್ಕಿರುವ ಸಮಾನತೆಯನ್ನು ಕಿತ್ತು ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಸ್ಥಿತಿ ಏನಾಗಿದೆ. ಅಧಿಕಾರ ಸಿಗುವವರೆಗೆ ಮುಂದೆ, ಅಧಿಕಾರ ಸಿಕ್ಕ ನಂತರ ಅನಂತ್‌ಕುಮಾರ್ ಮುಂದೆ ನೀವು ಹಿಂದೆ. ಕೇಂದ್ರದಲ್ಲಿ ಅಡ್ವಾಣಿಗೆ ಆದ ಗತಿ ರಾಜ್ಯದಲ್ಲಿ ನಿಮಗೂ ಆಗುತ್ತದೆ ಎಂದು ಇಬ್ರಾಹೀಂ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಲ ಸಂಗಮಕ್ಕೆ ಹೋದರೂ, ಬಸವಣ್ಣನ ಐಕ್ಯ ಸ್ಥಳದ ದರ್ಶನ ಮಾಡದೆ ಹಿಂದಿರುಗಿದ್ದಾರೆ. ಬಾಬು ಜಗಜೀವನ್‌ರಾಂ ಕಾಶಿಯಲ್ಲಿ ಒಂದು ಮೂರ್ತಿ ಅನಾವರಣ ಮಾಡಿದಾಗ, ಅದನ್ನು ಗಂಗಾಜಲದಿಂದ ಶುದ್ಧೀಕರಣ ಮಾಡಿದವರು ಈ ಸಂಘ ಪರಿವಾರದವರು. ಇಂತಹವರ ಸಂಘ ನಮಗೆ ಬೇಕೆ ಎಂದು ಅವರು ಪ್ರಶ್ನಿಸಿದರು.
ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ ಒಂದು ವರ್ಷದಲ್ಲಿ ದಲಿತರಿಗೆ ಎಷ್ಟು ಹಣ ಖರ್ಚು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಕಲ್ಯಾಣಕ್ಕೆ ಪ್ರತಿ ವರ್ಷ 27 ಸಾವಿರ ಕೋಟಿ ರೂ.ಖರ್ಚು ಮಾಡುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರಮೋದಿ ಇಡೀ ದೇಶಕ್ಕೆ ಖರ್ಚು ಮಾಡುವುದು 50 ಸಾವಿರ ಕೋಟಿ ರೂ.ಮಾತ್ರ ಎಂದು ಅವರು ಹೇಳಿದರು.
ನರೇಂದ್ರಮೋದಿ ದಲಿತರ ಮನೆಗೆ ದಲಿತರ ಕೈಯಿಂದಲೆ ಬೆಂಕಿ ಹಚ್ಚಿಸುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮಗಾಂಧಿ ಮೀಸಲಾತಿ ನೀಡಿದ ಚತುರ ವ್ಯಾಪಾರಿ ಎಂದು ಅಮಿತ್ ಶಾ ವ್ಯಂಗ್ಯವಾಡುತ್ತಾರೆ. ರಾಷ್ಟ್ರಪಿತನ ಬಗ್ಗೆ ಅವಾಶ್ಯ ಶಬ್ಧಗಳನ್ನು ಬಳಸುವುದನ್ನು ನಾವು ಸಹಿಸಿಕೊಳ್ಳಬೇಕೆ ಎಂದು ಇಬ್ರಾಹೀಂ ಕೇಳಿದರು.
ನಿಮ್ಮ ಬಳಿ ಬಜರಂಗದಳ ಇದ್ದರೆ ನಮ್ಮ ಬಳಿ ಬಸವ ದಳ, ಕನಕ ದಳ, ರಾಯಣ್ಣನ ದಳ ಇದೆ. ಈ ಟಗರು ಗುದ್ದಿದರೆ ಹೇಗಿರುತ್ತದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಕೇಳಿ ತಿಳಿದುಕೊಳ್ಳಿ. ಬಳ್ಳಾರಿಯ ಕೋಟೆಯನ್ನು ಕೆಡವಿದ್ದು ಇದೇ ಸಿದ್ದರಾಮಯ್ಯ. ಈಗ ಜನಾರ್ದನರೆಡ್ಡಿ, ಸೋಮಶೇಖರರೆಡ್ಡಿ ಸೇರಿ ಶ್ರೀರಾಮುಲುರನ್ನ ತಂದು ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಬಳ್ಳಾರಿಯಲ್ಲಿ ಬೆಟ್ಟಗಳನ್ನು ಅಗೆದದ್ದು ಆಯಿತು. ಈಗ ಬಾದಾಮಿಯ ಬೆಟ್ಟಗಳನ್ನು ಅಗೆಯಲು ಬಂದಿದ್ದಾರೆಯೆ ? ಅದಿರಿಗಾಗಿ ಸುಗ್ಗಲ್ಲಮ್ಮ ದೇವಸ್ಥಾನವನ್ನೆ ಕೆಡವಿದರು. ಸುಗ್ಲಲ್ಲಮ್ಮ ಶಾಪದಿಂದ ನಾಲ್ಕು ವರ್ಷ ಹೈದರಾಬಾದ್‌ನ ನಿಝಾಮರ ಜೈಲಿನಲ್ಲಿ ಬೆಳ್ಳಿ ತಟ್ಟೆಯಲ್ಲಿ ಗಂಜಿ ಕುಡಿದು ಬಂದಿದ್ದಾರೆ ಎಂದು ಜನಾರ್ದನರೆಡ್ಡಿ ವಿರುದ್ಧ ಇಬ್ರಾಹೀಂ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಈ ಭಾಗದಲ್ಲಿ ಗೆಲವು ಸಾಧಿಸಿದರೆ ಕಿತ್ತೂರು ರಾಣಿ ಚೆನ್ನಮ್ಮ ಆತ್ಮವು ನನ್ನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ವಂಶಸ್ಥ ಈ ರಾಜ್ಯಕ್ಕೆ ಬಂದಿದ್ದಾನೆ ಎಂದು ಸಂತಸ ಪಡುತ್ತದೆ. ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ಹಾಕುವ ಮೂಲಕ ಪ್ರಗತಿಪರ ರಾಜ್ಯ ನಿರ್ಮಾಣಕ್ಕೆ ಬೆಂಬಲ ನೀಡಿ ಎಂದು ಅವರು ಮನವಿ ಮಾಡಿದರು.
ಪ್ರಚಾರ ಸಭೆಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್, ಮುಧೋಳ ಕ್ಷೇತ್ರದ ಅಭ್ಯರ್ಥಿ ಸತೀಶ್ ಚಿನ್ನಪ್ಪ ಬಂಡಿವಡ್ಡರ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







