ಮನಸ್ಥಿತಿ ಬದಲಾದಾಗ ಮಾತ್ರ ಲೈಂಗಿಕ ದೌರ್ಜನ್ಯ ಕಡಿಮೆ: ನಿರ್ಮಲಾ ಸೀತಾರಾಮನ್
.jpg)
ಬೆಂಗಳೂರು, ಎ.29: ಜನರ ಮನಸ್ಥಿತಿಗಳು ಬದಲಾದಾಗ ಮಾತ್ರ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಕಡಿಮೆ ಆಗುತ್ತವೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರವಿವಾರ ನಗರದ ತೆಲುಗು ವಿಜ್ಞಾನ ಸಮಿತಿಯಲ್ಲಿ ಸಿಟಿಜನ್ ಪೋರಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪ್ರಾಪ್ತ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ತಡೆಯುವುದಕ್ಕಾಗಿಯೆ ಕೇಂದ್ರ ಸರಕಾರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಅದೇ ರೀತಿಯಾಗಿ ಜನರ ಮನಸ್ಥಿತಿಗಳೂ ಬದಲಾಗಬೇಕೆಂದು ಹೇಳಿದರು.
ಕರ್ನಾಟಕದಲ್ಲಿ ಮೇ 12ರಂದು ಚುನಾವಣೆ ನಡೆಯುತ್ತಿದ್ದು, ಪ್ರತಿಯೊಬ್ಬ ಮತದಾರನೂ ತಮ್ಮ ವ್ಯಾಪ್ತಿಗೆ ಬರುವ ಮತದಾನದ ಬೂತ್‌ಗೆ ಹೋಗಿ ಮತವನ್ನು ಚಲಾಯಿಸಬೇಕು. ಅಂದಾಗ ಮಾತ್ರ ರಾಜ್ಯದಲ್ಲಿ ಉತ್ತಮ ಸರಕಾರ ಹಾಗೂ ಉತ್ತಮ ಆಳಿತ ಸೀಗುತ್ತದೆ ಎಂದು ತಿಳಿಸಿದರು.
ಭಾರತ ಹಳ್ಳಿಗಳ ದೇಶವಾಗಿದೆ. ರಾಜಕೀಯ ಮುಖಂಡರುಗಳು ನಿಮ್ಮ ಗ್ರಾಮಗಳಿಗೆ ಬಂದರೆ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡದಿರುವ ಬಗ್ಗೆ ಅವರಲ್ಲಿ ಪ್ರಶ್ನಿಸಿ ಉತ್ತರವನ್ನು ಪಡೆಯಿರಿ. ಅವರು ಉತ್ತರವನ್ನು ನೀಡದಿದ್ದರೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ಸಲಹೆ ನೀಡಿದರು.
ಚುನಾವಣೆ ಸಂದರ್ಭಗಳಲ್ಲಿ ಅಕ್ರಮ ಹಣ ಸಾಗಾಣಿಕೆ, ಮದ್ಯ ಸಾಗಾಣಿಕೆ ಸೇರಿ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಚುನಾವಣೆ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಂದು ತಿಳಿಸಿದರು.
ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕಾರ್ಮಿಕರನ್ನಾಗಿ ಮಾಡುವ ಬದಲು ಆ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಹಾಗೂ ಈ ದೇಶದ ಆಸ್ತಿಯನ್ನಾಗಿ ಪರಿವರ್ತಿಸಬೇಕೆಂದು ಹೇಳಿದರು.







